ಜೋಯಿಡಾ ತಾಲ್ಲೂಕಿನ ಬಾಮಣಗಿಯಲ್ಲಿ ಪ್ರತಿಭಾ ಕಾರಂಜಿ ಕಾರ್ಯಕ್ರಮ

ಜೋಯಿಡಾ : ಜಿ.ಪಂ ಉತ್ತರ ಕನ್ನಡ,ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಮತ್ತು ಕ್ಷೇತ್ರ ಸಂಪನ್ಮೂಲ ಕೇಂದ್ರ ಜೋಯಿಡಾ, ಸರಕಾರಿ ಹಿ.ಪ್ರಾ ಕನ್ನಡ ಶಾಲೆ ಬಾಮಣಗಿ ಇವರ ಸಂಯುಕ್ತಾಶ್ರದಡಿ ಬಾಮಣಗಿಯ ಸರಕಾರಿ ಹಿ.ಪ್ರಾ.ಶಾಲೆಯಲ್ಲಿ ಇಂದು ಮಂಗಳವಾರ ಪ್ರಧಾನಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಬಶೀರ್ ಶೇಖ್ಪ್ವರು ಮಕ್ಕಳ ಪ್ರತಿಭೆಗಳನ್ನು ಅನಾವರಣಗೊಳಿಸುವ ಉದ್ದೇಶದಿಂದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ. ಇಲ್ಲಿ ಎಲ್ಲರ ಸಹಕಾರದಲ್ಲಿ ಕಾರ್ಯಕ್ರಮವನ್ನು ಅತ್ಯುತ್ತಮವಾಗಿ ಆಯೋಜಿಸಲಾಗಿದೆ ಎಂದು ಕಾರ್ಯಕ್ರಮಕ್ಕೆ ಶುಭ ಕೋರಿದರು.

ಇನ್ನೋರ್ವ ಮುಖ್ಯ ಅತಿಥಿ ಪತ್ರಕರ್ತ ಸಂದೇಶ್.ಎಸ್.ಜೈನ್ ಅವರು ಮಾತನಾಡಿ ಸಂಸ್ಕಾರವಿಲ್ಲದ ಶಿಕ್ಷಣಕ್ಕೆ ಬೆಲೆಯಿಲ್ಲ. ಶಿಕ್ಷಣದ ಜೊತೆ ಜೊತೆಗೆ ಸುಯೋಗ್ಯ ಸಂಸ್ಕಾರ ಅತೀ ಅಗತ್ಯ. ಉತ್ತಮ ಸಂಸ್ಕಾರವನ್ನು ಮೈಗೂಡಿಸಿಕೊಂಡ ಶಿಕ್ಷಣವಂತ ಸಮಾಜದಿಂದ ರಾಷ್ಟ್ರದ ಪ್ರಗತಿ ಸಾಧ್ಯ. ಗ್ರಾಮೀಣ ಭಾಗದಲ್ಲಿ ಶೈಕ್ಷಣಿಕ ಸೇವೆ ಸಲ್ಲಿಸುವ ಶಿಕ್ಷಕರು ನಿಜಕ್ಕೂ ಭಾಗ್ಯವಂತರು ಎಂದರು.

ಜೋಯಿಡಾ ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಯಶವಂತ ನಾಯ್ಕ ಅವರು ಮಾತನಾಡಿ ಮಕ್ಕಳ ಭವಿಷ್ಯದ ಉನ್ನತಿಗೆ ಪ್ರತಿಭಾ ಕಾರಂಜಿ ಕಾರ್ಯಕ್ರಮ ಸಹಕಾರಿ ಎಂದರು. ಗ್ರಾಮ ಪಂಚಾಯ್ತು ಅಭಿವೃದ್ಧಿ ಅಧಿಕಾರಿ ಲೀನಾ ನಾಯ್ಕ ಅವರು ಸಂದರ್ಭೋಚಿತವಾಗಿ ಮಾತನಾಡಿ ಕಾರ್ಯಕ್ರಮಕ್ಕೆ ಶುಭ ಕೋರಿದರು.

ಕಾರ್ಯಕ್ರಮವನ್ನು ಪ್ರಧಾನಿ ಗ್ರಾ.ಪಂ ಅಧ್ಯಕ್ಷರಾದ ಶಾಂತರಾಮ ಮಹೇರಕರ್ ಅವರು ಉದ್ಘಾಟಿಸಿದರು. ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಶಿವಾಜಿ ಪಾಟೀಲ್ ಅವರು ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಗ್ರಾ.ಪಂ ಸದಸ್ಯ ಗಣಪತಿ ಪ್ರಭು ಗೌಡ, ತಾಲ್ಲೂಕು ದೈಹಿಕ ಶಿಕ್ಷಣ ಪರಿವೀಕ್ಷಕರಾದ ಗೋವಿಂದ ಅಂಬಿಗ, ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಮಹಾದೇವ ಹಳದನಕರ್, ಮೊದಲಾದವರು ಉಪಸ್ಥಿತರಿದ್ದರು.

ಮುಖ್ಯೋಪಾಧ್ಯಯರಾದ ಕಿರಣ್ ನಾಯ್ಕ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮವನ್ನು ನಿರೂಪಿಸಿದರು. ಸಿ.ಆರ್.ಪಿ ವಿಶಾಲಾಕ್ಷಿ ಸ್ವಾಗತಿಸಿದರು. ಶಿಕ್ಷಕ ಮಂಜುನಾಥ್ .ಡಿ.ಶಾಸ್ತ್ರಿ ವಂದಿಸಿದರು.