ಧಾರವಾಡ ಟೋಲ್ ಹತ್ತಿರ ಅನಾರೋಗ್ಯ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿ ಪತ್ತೆ

ಜೋಯಿಡಾ : ತಾಲ್ಲೂಕಿನ ರಾಮನಗರ-ಧಾರವಾಡ ರಸ್ತೆಗೆ ಹೊಂದಿಕೊಂಡಂತೆ ಖಾನಾಪುರ ವ್ಯಾಪ್ತಿಯ ಪಿಂಪಲಿ ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿ‌ ಬರುವ ಧಾರವಾಡ ಟೋಲ್ ಹತ್ತಿರ ಅನಾರೋಗ್ಯ ಸ್ಥಿತಿಯಲ್ಲಿದ್ದ ಅಪರಿಚಿತ ವ್ಯಕ್ತಿಯೋರ್ವರು ಪತ್ತೆಯಾಗಿರುವ ಘಟನೆ ಭಾನುವಾರ ರಾತ್ರಿ ನಡೆದಿದೆ.

ಯಾರೋ ಅಪರಿಚಿತ ವ್ಯಕ್ತಿ ಗಾಯಗೊಂಡು ಬಿದ್ದಿರುವ ಮಾಹಿತಿ ರಾಮನಗರ ಪೊಲೀಸ್ ಠಾಣೆಗೆ ಬಂದ ತಕ್ಷಣವೆ ರಾಮನಗರದ ಪಿಎಸ್ಐ ಬಸವರಾಜ‌ ಮಬನೂರು ಅವರ ನೇತೃತ್ವದಲ್ಲಿ ಪೊಲೀಸರ ತಂಡ 108 ಆಂಬುಲೆನ್ಸ್ ನವರಿಗೆ ಮಾಹಿತಿ ನೀಡಿ ಸ್ಥಳಕ್ಕೆ ತೆರಳಿತ್ತು. ತಕ್ಷಣವೇ ಸ್ಥಳಕ್ಕೆ ಬಂದ 108 ಆಂಬುಲೆನ್ಸ್ ಮೂಲಕ ಅನಾರೋಗ್ಯ ಪೀಡಿತ ವ್ಯಕ್ತಿಯನ್ನು ರಾಮನಗರದ ಸರಕಾರಿ ಆಸ್ಪತ್ರೆಗೆ ಕರೆತರಲಾಯಿತು.

ಈ ವ್ಯಕ್ತಿ ಅಪರಿಚಿತನಾಗಿದ್ದು, ತಲೆಯ ಮೇಲೆ ಹಾಗೂ ಎಡಗೈ ಮೇಲೆ ಯಾವುದೋ ಪ್ರಾಣಿಯು ತಿರುಚಿದ ರೀತಿಯಲ್ಲಿ ಗಾಯವಾಗಿರುವುದು ಕಂಡು ಬರುತ್ತಿದ್ದು, ಗಾಯಗೊಂಡ ವ್ಯಕ್ತಿ ಮಾತನಾಡುತ್ತಿಲ್ಲ. ಸದ್ಯ ರಾಮನಗರ ಸರಕಾರಿ ಆಸ್ಪತ್ರೆಯಲ್ಲಿ ಚಿಕತ್ಸೆ ಪಡೆಯುತ್ತಿರುವ ಈ ವ್ಯಕ್ತಿಯ ಬಗ್ಗೆ ಮಾಹಿತಿ ಸಿಕ್ಕರೆ ಕೂಡಲೆ ರಾಮನಗರ ಪೊಲೀಸ ಠಾಣೆಯ ದೂರವಾಣಿ ಸಂಖ್ಯೆ 08383 248133 ಅಥವಾ ಮೊಬೈಲ್ ಸಂಖ್ಯೆ. 9480805261 ಗೆ ಸಂಪರ್ಕಿಸುವಂತೆ ರಾಮನಗರ ಪೊಲೀಸ್ ಠಾಣೆ ಪ್ರಕಟಣೆಯಲ್ಲಿ ತಿಳಿಸಿದೆ.