ಜೋಯಿಡಾ ತಾಲ್ಲೂಕಿನ ರಾಮನಗರದಲ್ಲಿ ಸೋರುತ್ತಿರುವ ಎರಡು ವರ್ಷಗಳ‌ ಹಿಂದೆ ನಿರ್ಮಾಣಗೊಂಡ ಅಂಗನವಾಡಿ ಕೇಂದ್ರ

ಜೋಯಿಡಾ: ತಾಲ್ಲೂಕಿನ ಮೊದಲ ಸ್ಮಾರ್ಟ್ ಅಂಗನವಾಡಿ ಕೇಂದ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ರಾಮನಗರದ ಹನುಮಾನ ಗಲ್ಲಿಯಲ್ಲಿರುವ ಅಂಗನವಾಡಿ 13ರ ಕಟ್ಟಡ ಕೇವಲ ಎರಡೇ ವರ್ಷದಲ್ಲಿ ಸೋರಲಾರಂಭಿಸಿದೆ. ಈ ಕಟ್ಟಡದ ಗೋಡೆಯಿಂದ ನೀರು ಸೋರುವುದರಿಂದ ಕೊಠಡಿಯಲ್ಲಿ ನೀರು ಸಂಗ್ರಹವಾಗುತ್ತಿದೆ. ಇದರಿಂದ ಪುಟಾಣಿ ಮಕ್ಕಳು ಅಂಗನವಾಡಿಗೆ ಹೋಗುವುದೇ ದುಸ್ಥರವಾಗಿದೆ.

ಮಕ್ಕಳಿಗೆ ಸ್ಮಾರ್ಟ್ ಪ್ರಿಸ್ಕೂಲ್ ಶಿಕ್ಷಣ ನೀಡುವ ಉದ್ದೇಶದಿಂದ ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೂಲಕ 2018-19ನೇ ಸಾಲಿನ ವಿಶೇಷ ಅಭಿವೃದ್ಧಿ ಯೋಜನೆಯಡಿ ರಾಮನಗರದ ಹನುಮಾನ್ ಗಲ್ಲಿಯಲ್ಲಿ ಅಂಗನವಾಡಿ ಕೇಂದ್ರವನ್ನು ಸ್ಥಾಪಿಸಲಾಯಿತು. ಜಿಲ್ಲಾ ನಿರ್ಮಿತಿ ಕೇಂದ್ರದಿಂದ 18 ಲಕ್ಷ ರೂ ಅನುದಾನದಲ್ಲಿ ಈ ಕಟ್ಟಡ ನಿರ್ಮಾಣವಾಗಿದೆ. ಈ ಕಟ್ಟಡವನ್ನು ಶಾಸಕ ಆರ್.ವಿ.ದೇಶಪಾಂಡೆ ಅವರು 27 ಜನವರಿ 2021 ರಂದು ಉದ್ಘಾಟಿಸಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.

ಇದೀಗ ಅಂಗನವಾಡಿ ಕಟ್ಟಡದ ಗೋಡೆಯಿಂದ ಮಳೆ ನೀರು ಹರಿದು ಬರುತ್ತಿದ್ದು, ಮಕ್ಕಳು ಕುಳಿತುಕೊಳ್ಳಲು ಪರದಾಡುವಂತಾಗಿದೆ. ಅಡುಗೆ ಮನೆಯಲ್ಲೂ ನೀರು ಬರುತ್ತಿರುವುದರಿಂದ ಧಾನ್ಯಗಳು ಹಾಗೂ ಇನ್ನಿತರೇ ಆಹಾರ ವಸ್ತುಗಳನ್ನು ಶೇಖರಣೆ ಮಾಡುವುದು ಕಷ್ಡವಾಗತೊಡಗಿದೆ.

ಖುಷಿ ಖುಷಿಯಲ್ಲಿ‌ ಮನೆಯಿಂದ ಬರುವ ಪುಟಾಣಿ ಮಕ್ಕಳಿಗೆ ಇದೀಗ ಅಂಗನವಾಡಿ ಕಟ್ಟಡದ ದುಸ್ಥಿತಿ ಅವರ ಸಂಭ್ರಮವನ್ನು ಕಸಿದುಕೊಂಡಂತಾಗಿದೆ. ಸಂಬಂಧಪಟ್ಡವರು ಈ ಅಂಗನವಾಡಿ ಕೇಂದ್ರದ ದುರಸ್ತಿಗೆ ಅಗತ್ಯ ಕ್ರಮವನ್ನು ಕೈಗೊಳ್ಳಬೇಕಾಗಿದೆ.