ಸಂಸ್ಕಾರದ ಕೊರತೆಯಿಂದ ಯುವ ಜನತೆ ಹಾದಿ ತಪ್ಪುತ್ತಿದೆ : ವಿನೋದ್ ರೆಡ್ಡಿ

ಹಳಿಯಾಳ : ತಾಂತ್ರಿಕತೆ ಬೆಳೆಯುತ್ತಿದ್ದಂತೆಯೆ ನಮ್ಮ ಸಂಸ್ಕೃತಿ, ಸಂಸ್ಕಾರ ಮತ್ತು ಆದರ್ಶ ಜೀವನ ಕ್ರಮಗಳು ಬದಲಾಗುತ್ತಿದೆ. ಸಂಸ್ಕಾರದ ಕೊರತೆಯಿಂದ ಯುವ ಜನತೆ ಹಾದಿ ತಪ್ಪುತ್ತಿದೆ. ಬದುಕಿಗೆ ಶಿಕ್ಷಣ ಎಷ್ಟು ಮುಖ್ಯವೋ, ಜೀವನದ ಉನ್ನತಿಗೆ ಸಂಸ್ಕಾರಯುತವಾದ ನಡವಳಿಕೆಯು ಅಷ್ಟೇ ಮುಖ್ಯ ಎಂದು ಹಳಿಯಾಳದ ಪಿಎಸ್ಐ ವಿನೋದ್ ರೆಡ್ಡಿಯವರು ಹೇಳಿದರು.

ಅವರು ಅಖಿಲ ಭಾರತ ವೀರಶೈವಾ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕ, ತಾಲ್ಲೂಕು ಘಟಕ, ಮಹಿಳಾ ಮತ್ತು ಯುವ ಘಟಕ ಹಾಗೂ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಮತ್ತು ತಾಲ್ಲೂಕು ಘಟಕ, ಶ್ರೀ.ಚೆನ್ನಬಸವೇಶ್ವರ ಶಿವಾನುಭವ ಸಂಘ, ಅಕ್ಕನ ಬಳಗ ಹಾಗೂ ಪ್ರಗತಿಪರ ವೀರಶೈವ ಯುವಜನ ಸಂಘ ಹಳಿಯಾಳ ಇವರ ಸಂಯುಕ್ತಾಶ್ರಯದಲ್ಲಿ ಹಳಿಯಾಳ ಪಟ್ಟಣದ ಜವಳಿಗಲ್ಲಿಯ ಶ್ರೀಗುರು ವಿರಕ್ತ ಮಠದಲ್ಲಿ ಆಯೋಜಿಸಲಾಗಿರುವ ಶರಣರ ಜೀವನ ದರ್ಶನ ಪ್ರವಚನ ಕಾರ್ಯಕ್ರಮದಲ್ಲಿ ಇಂದು ಭಾಗವಹಿಸಿ ಯುವಗೋಷ್ಟಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಶರಣರ ಚಿಂತನೆಗಳು ನಿರಂತರವಾಗಿ ನಡೆಯುತ್ತಿರಬೇಕು. ಇಡೀ ಸಮಾಜವನ್ನು ತಿದ್ದಿ ತೀಡುವ ಪರಮೋಚ್ಛ ಶಕ್ತಿ ಶರಣರ ವಚನಗಳಿಗಿವೆ. ನಾವು ನಮ್ಮ ಮಕ್ಕಳನ್ನು ವೈದ್ಯರು, ಇಂಜಿನಿಯರ್ ಮಾಡಬೇಕೆಂದು ಹಂಬಲಿಸಿ ಅವರಿಗೆ ಶಿಕ್ಷಣವನ್ನು ಕೊಡಿಸುತ್ತಿದ್ದೇವೆ. ಈ ಹಂಬಲದ ಜೊತೆಗೆ ಮಕ್ಕಳಿಗೆ ಸುಯೋಗ್ಯ ಜೀವನ ಸಂಸ್ಕಾರಗಳನ್ನು ಕಲಿಸಿಕೊಡುವ ನಿಟ್ಟಿನಲ್ಲಿ ಪಾಲಕರು ವಿಶೇಷ ಮುತುವರ್ಜಿ ವಹಿಸಿದಾಗ ಯುವ ಜನತೆ ಆದರ್ಶ ಸಮಾಜ ನಿರ್ಮಾಣದೆಡೆಗೆ ಸಾಗಲು ಸಾಧ್ಯವಿದೆ. ಆ ನಿಟ್ಟಿನಲ್ಲಿ ಶರಣರ ಜೀವನ ದರ್ಶನ ಪ್ರವಚನ ಕಾರ್ಯಕ್ರಮದ ಪ್ರೇರಣಾದಾಯಿಯಾಗಲೆಂದರು.

ಮಹಾಂತ ದೇಸಾಯಿ ಸ್ವಾಮಿಯವರು ಶರಣರ ಜೀವನ ದರ್ಶನದ ಕುರಿತಂತೆ ಪ್ರವಚನವನ್ನು ನೀಡಿದರು. ಮುಖ್ಯ ಅತಿಥಿಗಳಾಗಿ ಹಳಿಯಾಳ ಪುರಸಭೆಯ ಮಾಜಿ ಅಧ್ಯಕ್ಷರಾದ ಉಮೇಶ್ ಬೋಳಶೆಟ್ಟಿ, ಮುಖಂಡರುಗಳಾದ ರವಿ ತೋರಣಗಟ್ಟಿ, ಶಶಿಧರ್ ಓಶಿಮಠ ಮೊದಲಾದವರು ಭಾಗವಹಿಸಿದ್ದರು.

ಶರಣ ಸಾಹಿತ್ಯ ಪರಿಷತ್ತಿನ ಹಳಿಯಾಳ ತಾಲ್ಲೂಕು ಘಟಕದ ಅಧ್ಯಕ್ಷರಾದ ಸುನೀಲ್ ಹಿರೇಮಠ ಸ್ವಾಗತಿಸಿದರು. ಮಲಪ್ರಭಾ ಉಪ್ಪಿನ್ ವಂದಿಸಿದರು. ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಶಿವದೇಸಾಯಿ ಸ್ವಾಮಿಯವರು ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮವನ್ನು ನಿರೂಪಿಸಿದರು.