ದಾಂಡೇಲಿ : ಅದು ಬಹಳ ದೂರದಲ್ಲಿ ಕಟ್ಟಿ ಬಿಟ್ಟಿದ್ದಾರೆ ಎಂದು ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದ್ದ ನಗರದ ಅಂಬೇವಾಡಿಯಲ್ಲಿ ನಿರ್ಮಾಣಗೊಂಡು ಉದ್ಘಾಟನೆಯಾಗಿ ಕಳೆದ ಒಂದುವರೆ ವರ್ಷದಿಂದ ಆರೋಗ್ಯ ಸೇವೆ ನೀಡುವ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿರುವ ಆಸ್ಪತ್ರೆಯೆ ಆಯುಷ್ ಆಸ್ಪತ್ರೆ.
ಶಾಸಕರಾದ ಆರ್.ವಿ.ದೇಶಪಾಂಡೆಯವರು ವಿಶೇಷ ಮುತುವರ್ಜಿ ವಹಿಸಿ ಮಂಜೂರು ಮಾಡಿದ ಆಯುಷ್ ಆಸ್ಪತ್ರೆ ಇದೀಗ ದಾಂಡೇಲಿ ನಗರ ಹಾಗೂ ದಾಂಡೇಲಿ ಸುತ್ತಮುತ್ತಲ ಜನತೆಯ ಆರೋಗ್ಯ ವರ್ಧನೆಗಾಗಿ ಶ್ರಮಿಸುವ ಮೂಲಕ ಸಾರ್ವಜನಿಕರ ನೆಚ್ಚಿನ ಆಸ್ಪತ್ರೆಯಾಗಿದೆ. 10 ಬೆಡ್ ಒಳಗೊಂಡ ಆಸ್ಪತ್ರೆಯಾಗಿರುವ ಇಲ್ಲಿಗೆ ದಾಂಡೇಲಿ ಹಾಗೂ ದಾಂಡೇಲಿ ಸುತ್ತಮುತ್ತಲ ಹೆಚ್ಚಿನ ಸಾರ್ವಜನಿಕರು ಬಂದು ಆರೋಗ್ಯ ಸೇವೆಯನ್ನು ಪಡೆದುಕೊಳ್ಳುತ್ತಿದ್ದಾರೆ. ಈ ಆಸ್ಪತ್ರೆ ದಾಂಡೇಲಿ ಬಸ್ ನಿಲ್ದಾಣಕ್ಕಿಂತ ಸ್ವಲ್ಪ ದೂರವಿದ್ದರೂ, ತನ್ನ ಸೇವೆ ಮತ್ತು ವೈದ್ಯರಿಂದ ಹಿಡಿದು ಸಿಬ್ಬಂದಿಗಳ ಸೇವಾ ಮನೋಭಾವನೆಯ ನಡವಳಿಕೆಯಿಂದ ಸಾರ್ವಜನಿಕರ ಮನಸ್ಸಿಗೆ ಅತೀ ಹತ್ತಿರದ ಆಸ್ಪತ್ರೆಯಾಗಿದೆ ಎಂದರೇ ಅತಿಶಯೋಕ್ತಿ ಎನಿಸದು. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಇಲ್ಲಿಯ ಆರೋಗ್ಯ ಸೇವೆಯನ್ನು ಪಡೆದುಕೊಳ್ಳುತ್ತಿದ್ದಾರೆ ಎಂದು ಆಯುಷ್ ವೈದ್ಯಾಧಿಕಾರಿ ಡಾ.ದೀಪಕ್ ಮಹಾಲೆಯವರು ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.