ಅಂಕೋಲಾ ತಾಲೂಕು ಮಟ್ಟದ ಪದವಿಪೂರ್ವ ಕಾಲೇಜುಗಳ ಕ್ರೀಡಾಕೂಟ ಯಶಸ್ವಿಯಾಗಿ ಸಂಪನ್ನ

ಅಂಕೋಲಾ: ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ ಕಾಲೇಜು), ಉಪ ನಿರ್ದೇಶಕರ ಕಾರ್ಯಾಲಯ ಕಾರವಾರ ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜು ಅಂಕೋಲಾದ ಸಂಯುಕ್ತ ಆಶ್ರಯದಲ್ಲಿ ಅಂಕೋಲಾ ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ಕ್ರೀಡಾಕೂಟ ತಾಲೂಕಿನ ಶೆಟಗೇರಿಯ ಸತ್ಯಾಗ್ರಹ ಸ್ಮಾರಕ ವಿದ್ಯಾಲಯದ ಕ್ರಾಂತಿ ಮೈದಾನದಲ್ಲಿ ಯಶಸ್ವಿಯಾಗಿ ಸಂಪನ್ನಗೊಂಡಿತು.
ಶೆಟಗೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಲಕ್ಷ್ಮಿದರ ನಾಯಕ ಕ್ರೀಡಾ ಧ್ವಜಾರೋಹಣ ನೆರವೇರಿಸಿ ತಾಲೂಕು ಮಟ್ಟದ ಕ್ರೀಡಾಕೂಟವನ್ನು ಉದ್ಘಾಟಿಸಿದರು. ಗ್ರಾಮ ಪಂಚಾಯಿತಿ ವತಿಯಿಂದ ಕ್ರೀಡಾಕೂಟಕ್ಕೆ ಅಗತ್ಯ ನೆರವು ನೀಡುವುದಾಗಿ ತಿಳಿಸಿ ಕ್ರೀಡಾಕೂಟಕ್ಕೆ ಶುಭ ಕೋರಿದರು.
ಕ್ರೀಡಾಕೂಟದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಹಿರಿಯ ಸಾಹಿತಿ ಮತ್ತು ರಾಷ್ಟ್ರೀಯ ಸತ್ಯಾಗ್ರಹ ಸ್ಮಾರಕ ಶಿಕ್ಷಣ ಸಂಸ್ಥೆಯ ಗೌರವಾಧ್ಯಕ್ಷ ಶಾಂತರಾಮ ನಾಯಕ ಹಿಚ್ಕಡ ಮಾತನಾಡಿ, ಇಲ್ಲಿನ ಕ್ರಾಂತಿ ಮೈದಾನ ಐತಿಹಾಸಿಕ ನೆಲ. ಆಗಸ್ಟ್ 9ರ ಕ್ರಾಂತಿಯ ನೆನಪಿನಲ್ಲಿ ಇದಕ್ಕೆ ಕಾಂತಿ ಮೈದಾನ ಎಂದು ಹೆಸರಿಡಲಾಗಿದೆ. ಮೈದಾನದ ದ್ವಾರ ಬಾಗಿಲಿಗೆ ಸ್ವಾತಂತ್ರದ ಹೆಬ್ಬಾಗಿಲು ಹಾಗೂ ಶಾಲಾ ವೇದಿಕೆಗೆ ಸ್ವಾತಂತ್ರ್ಯ ವೇದಿಕೆ ಎನ್ನುವ ಹೆಸರಿಟ್ಟು ಸ್ವಾತಂತ್ರ್ಯ ಮತ್ತು ಸ್ವಾತಂತ್ರ್ಯ ಹೋರಾಟದ ನೆನಪು ಸದಾ ಹಸಿರಾಗಿರುವಂತೆ ನೋಡಿಕೊಳ್ಳಲಾಗಿದೆ. ಕಳೆದ 65 ವರ್ಷಗಳಿಂದ ವಲಯ ತಾಲೂಕು ಜಿಲ್ಲೆ ಮತ್ತು ರಾಜ್ಯಮಟ್ಟದ ಕ್ರೀಡಾಕೂಟಗಳು ಇಲ್ಲಿ ನಡೆದಿವೆ. ಸತ್ಯಾಗ್ರಹ ಸ್ಮಾರಕ ಶಿಕ್ಷಣ ಸಂಸ್ಥೆ ಇಲ್ಲಿ ನಡೆಯುವ ಎಲ್ಲಾ ಅಪೇಕ್ಷಣೀಯ ಚಟುವಟಿಕೆಗಳಿಗೂ ಅವಕಾಶ ಒದಗಿಸುತ್ತದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸರ್ಕಾರಿ ಪದವಿ ಪೂರ್ವ ಕಾಲೇಜು ಅಂಕೋಲಾದ ಹಿರಿಯ ಉಪನ್ಯಾಸಕ ಮಹೇಶ ನಾಯಕ, ಕ್ರಾಂತಿ ಮೈದಾನದಲ್ಲಿ ಕ್ರೀಡಾಕೂಟ ಯಶಸ್ವಿಯಾಗಲು ಅಗತ್ಯವಿರುವ ಎಲ್ಲಾ ಸೌಲಭ್ಯಗಳು ಇವೆ. ತಾಲೂಕಿನ 9 ಪದವಿ ಪೂರ್ವ ಕಾಲೇಜುಗಳ ಸಹಕಾರದಿಂದ ಕ್ರೀಡಾಕೂಟ ನಡೆಯುತ್ತಿದೆ. ಎಲ್ಲಾ ಕಾಲೇಜುಗಳು ನಿರ್ಣಾಯಕರ ನಿರ್ಣಯವನ್ನು ಗೌರವಿಸಿ ನಡೆಯುವ ತೀರ್ಮಾನವನ್ನು ಹಿಂದಿನಿಂದಲೂ ನಡೆದುಕೊಂಡು ಬಂದಿರುವುದು ಸೌಹಾರ್ದಯುತ ಬಾಂಧವ್ಯಕ್ಕೆ ಸಾಕ್ಷಿಯಾಗಿದೆ ಎಂದರು.
ಸತ್ಯಾಗ್ರಹ ಸ್ಮಾರಕ ವಿದ್ಯಾಲಯದ ಮುಖ್ಯೋಪಾಧ್ಯಾಯ ಎನ್ ವಿ ರಾಠೋಡ್, ಉದ್ಯಮಿ ದೇವಿದಾಸ ಪ್ರಭು, ಸಿಟಿ ಲಯನ್ಸ್ ಕ್ಲಬ್ ಅಧ್ಯಕ್ಷ ಡಾ. ವಿಜಯದೀಪ ಮತ್ತು ವಿವಿಧ ಕಾಲೇಜುಗಳ ಪ್ರಾಚಾರ್ಯರು ವೇದಿಕೆಯಲ್ಲಿದ್ದರು.
ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯೆ ರೇಖಾ ರಾವ್ ಸ್ವಾಗತಿಸಿದರು. ಹಿರಿಯ ಉಪನ್ಯಾಸಕ ಜಿ.ಎಂ ನಾಯಕ ಕಾರ್ಯಕ್ರಮ ನಿರ್ವಹಿಸಿದರು. ಕ್ರೀಡಾ ವಿಭಾಗದ ಸಂಚಾಲಕ ದೀಪಕ ನಾಯ್ಕ ವಂದಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಮಂಗಳಲಕ್ಷ್ಮಿ ಪಾಟೀಲ ನೇತೃತ್ವದಲ್ಲಿ ತಾಲೂಕಿನ ವಿವಿಧ ಪ್ರೌಢಶಾಲೆಗಳ ಮತ್ತು ಪದವಿ ಪೂರ್ವ ಕಾಲೇಜುಗಳ ದೈಹಿಕ ಶಿಕ್ಷಕರು ನಿರ್ಣಾಯಕರಾಗಿ ಕಾರ್ಯನಿರ್ವಹಿಸಿದರು. ಪ್ರಾಚಾರ್ಯ ರವಿ ಗೌಡ, ಉಪನ್ಯಾಸಕರಾದ ಜಿ.ಎಸ್ ಗೌಡ, ನಾರಾಯಣ ಗೌಡ, ಕವಿತಾ ಎಲ್, ಪ್ರಮೋದ ಆಚಾರಿ, ವಸಂತ ಗೌಡ, ವಿವಿಧ ಕಾಲೇಜುಗಳ ಉಪನ್ಯಾಸಕರು, ಕಾಲೇಜಿನ ಜ್ಞಾನೇಶ ನಾಯ್ಕ, ಶುಭಂ ಗಾಂವ್ಕರ್, ಹರ್ಷ ಶೆಟ್ಟಿ, ವಿದ್ಯಾರ್ಥಿ ಪ್ರತಿನಿಧಿಗಳಾದ ನಂದನ ಗೌಡ, ಸಂಜನಾ ನಾಯ್ಕ ಮತ್ತಿತರರು ಇದ್ದರು. ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳ ತಂಡ ಸಂಘಟಿತವಾಗಿ ಕ್ರೀಡಾಕೂಟದ ಅಚ್ಚುಕಟ್ಟಾದ ನಿರ್ವಹಣೆಗೆ ಸಹಕರಿಸಿ ಮೆಚ್ಚುಗೆಗೆ ಪಾತ್ರರಾದರು.