ಭಟ್ಕಳ: ತಾಲೂಕಿನ ಯಲ್ವಡಿಕವೂರ ಗ್ರಾ.ಪಂ. ವ್ಯಾಪ್ತಿಯ ಪುರವರ್ಗ ಗ್ರಾಮದ ಸರ್ಕಾರಿ ಹಾಡಿ ಜಾಗದಲ್ಲಿ ಘನತಾಜ್ಯ ವಿಲೇವಾರಿ ಘಟಕ ನಿರ್ಮಾಣಕ್ಕೆ ಸಾರ್ವಜನಿಕ ತಡೆಹಿಡಿದು ಆಕ್ರೋಶ ವ್ಯಕ್ತಪಡಿಸಿದ ಘಟನೆ ಗುರುವಾರದಂದು ನಡೆದಿದೆ.
ಈ ಹಿಂದೆ ಸರಕಾರದ ಆದೇಶದಂತೆ ಜಿಲ್ಲಾಡಳಿತವೂ ತಾಲೂಕಿನ ಎಲ್ಲಾ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಗ್ರಾಮದಲ್ಲಿ ಘನ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣಕ್ಕೆ ಸೂಚನೆ ನೀಡಲಾಗಿತ್ತು.
ಅದರಂತೆ ಭಟ್ಕಳದ ಯಲ್ವಡಿಕವೂರ ಗ್ರಾ.ಪಂ. ವ್ಯಾಪ್ತಿಯ ಪುರವರ್ಗ ಸರ್ವೇ ನಂ 122 ರಲ್ಲಿ ಘನ ತ್ಯಾಜ್ಯ ಘಟಕ ನಿರ್ಮಾಣಕ್ಕೆ ಪಂಚಾಯತ ಪಿಡಿಓ ಗುರುವಾರದಂದು ಜೆಸಿಬಿ ತರಿಸಿ ನಿಗದಿತ ಸ್ಥಳವನ್ನು ಸ್ವಚ್ಚಗೊಳಿಸಿ ಘಟಕದ ನಿರ್ಮಾಣಕ್ಕೆ
ಮುಂದಾಗಿದ್ದು, ಈ ವಿಚಾರ ತಿಳಿದ ನೂರಾರು ಗ್ರಾಮಸ್ಥರು ಸ್ಥಳದಲ್ಲಿ ಜಮಾವಣೆಗೊಂಡರು.
ನಂತರ ಗ್ರಾಮಸ್ಥರು ಹಾಗೂ ಪಿಡಿಓ ಹಾಗೂ ಪಂಚಾಯತ ಅಧ್ಯಕ್ಷ ಉಪಾಧ್ಯಕ್ಷರ ನಡುವೆ ಮಾತುಕತೆ ನಡೆದಿದ್ದು ಈ ವೇಳೆ ಗ್ರಾಮಸ್ಥರು
ಈ ನಿಗದಿತ ಸ್ಥಳದಲ್ಲಿ ಪ್ರಮುಖವಾಗಿ ನೂರಾರು ಮನೆಗಳು, ಪುರಾತನ ದೇವಸ್ಥಾನ, ಮಸೀದಿ, ಶಾಲೆ, ಚೌಥನಿಯ ನದಿ ಇದ್ದು, ಹೀಗಿರುವಲ್ಲಿ ಯಲ್ವಡಿಕವೂರ ಗ್ರಾಮ ಪಂಚಾಯತ್ ಈ ಭಾಗದಲ್ಲಿ ಘನ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಮಾಡುತ್ತಿರುವುದು ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದರು.
ಈ ಹಿಂದೆ 2022 ರಲ್ಲಿ ಇಲ್ಲಿಯೇ ಸಮೀಪದ ಕಾಸ್ಮುಡಿ ದೇವಸ್ಥಾನದಲ್ಲಿ ಪಂಚಾಯತ ವತಿಯಿಂದ ನಡೆಸಲಾದ ಗ್ರಾಮ ಸಭೆಯಲ್ಲಿ ಇದೇ ಘನ ತ್ಯಾಜ್ಯ ವಿಲೇವಾರಿ ಘಟಕದ ಕುರಿತು ನಡೆದ ಚರ್ಚೆಯಲ್ಲಿ ಗ್ರಾಮಸ್ಥರಿಂದ ವಿರೋಧ ವ್ಯಕ್ತವಾಗಿತ್ತು. ಆದರೆ ಅಂದು ಪಂಚಾಯತ ಪಿಡಿಓಗಳು ಸಭೆಯ ಠರಾವು ಮಾಡದೇ ಮೌಖಿಕವಾಗಿ ಸಲಹೆ ರೂಪದಲ್ಲಿ ತೆಗೆದುಕೊಂಡಿದ್ದೇವೆ ಎಂದು ಇಂದು ಹೇಳುತ್ತಿದ್ದೀರಿ ಹಾಗಿದ್ದರೆ ಗ್ರಾಮಸ್ಥರ ವಿರೋಧಕ್ಕೆ ಯಾವುದೇ ಬೆಲೆ ಇಲ್ಲವೇ ಎಂದು ಪ್ರಶ್ನಿಸಿದರು.
ಇದಕ್ಕೆ ಪಿಡಿಓ ಅಧಿಕಾರಿ ಜಿಲ್ಲಾಢಳಿತದ ಸೂಚನೆಯಂತೆ ಘಟಕ ನಿರ್ಮಾಣ ಕಾರ್ಯಕ್ಕೆ ಮುಂದಾಗಿದ್ದೇವೆ. ಈ ಬಗ್ಗೆ ಗ್ರಾಮಸ್ಥರು ಜಿಲ್ಲಾಧಿಕಾರಿಗಳ ಭೇಟಿ ಮಾಡಿ ನಿಮ್ಮ ತಕರಾರು ನೀಡಿ ಎಂದು ಹೇಳಿ ಸದ್ಯಕ್ಕೆ ಕಾರ್ಯ ನಿಲ್ಲಿಸಲಾಯಿತು.
ಈ ಹಿಂದೆ ಇದೇ ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಭೇಟಿ ನೀಡಿ ಗ್ರಾಮಸ್ಥರ ಮಾಹಿತಿ ಅಭಿಪ್ರಾಯ ಪಡೆದು ತೆರಳಿದ್ದರು. ಅಂದು ಸಹ ಗ್ರಾಮಸ್ಥರು ಈ ನಿಗದಿತ ಸ್ಥಳದಲ್ಲಿ ವಿಲೇವಾರಿ ಘಟಕ ನಿರ್ಮಾಣಕ್ಕೆ ವಿರೋಧಿಸಿದ್ದರು ಸಹ ಮತ್ತೆ ಮತ್ತೆ ನಿರ್ಮಾಣಕ್ಕೆ ಮುಂದಾಗಿರುವದಕ್ಕೆ ಆಕ್ರೋಶ ವ್ಯಕ್ತಪಡಿಸಿದರು.
ಕೊನೆಯಲ್ಲಿ ಘಟಕ ನಿರ್ಮಾಣಕ್ಕೆ ಮುಂದಾಗಿದ್ದ ಪಂಚಾಯತ ಪಿಡಿಓ ಹಾಗೂ ಅಧ್ಯಕ್ಷ ಉಪಾಧ್ಯಕ್ಷ ಹಾಗೂ ಕಾರ್ಯದರ್ಶಿಗಳು ಗ್ರಾಮಸ್ಥರ ಒತ್ತಡಕ್ಕೆ ಮಣಿದು ತಾತ್ಕಾಲಿಕವಾಗಿ ಕಾಮಗಾರಿ ನಿಲ್ಲಿಸಿ ಸ್ಥಳದಿಂದ ತೆರಳಿದರು.
ಈ ವೇಳೆ ಗ್ರಾಮಸ್ಥರಾದ ಅರುಣ ನಾಯ್ಕ ಮಾತನಾಡಿದ ‘ಕಳೆದ 2020-21 ನೇ ಸಾಲಿನಲ್ಲಿ ಈ ಭಾಗದಲ್ಲಿ ಕಸ ವಿಲೇವಾರಿ ಘಟಕ ನಿರ್ಮಾಣ ಮಾಡದಂತೆ ಊರಿನ ಗ್ರಾಮಸ್ಥರೆಲ್ಲ ಸೇರಿ ಆಗಿನ ಜಿಲ್ಲಾಧಿಕಾರಿಗಳಿಗೆ ಲಿಖಿತವಾಗಿ ಮನವಿ ಕೂಡ ಸಲ್ಲಿದ್ದರು. ಆದರೆ ಇಂದು ಯಲ್ವಡಿಕವೂರ ಗ್ರಾ.ಪಂ ಪಿಡಿಒ ಸ್ಥಳಕ್ಕೆ ಜೆ.ಸಿ.ಬಿ ತಂದು ಘನ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣಕ್ಕೆ ಕೆಲಸ ಪ್ರಾರಂಭ ಮಾಡಿರುದನ್ನು ಕಂಡು ಕೂಡಲೇ ಕೆಲಸವನ್ನು ತಡೆಹಿಡಿದಿದ್ದೇವೆ ಎಂದ ಅವರು ಮುಂದಿನ ದಿನಗಳಲ್ಲಿ ಈ ಸ್ಥಳದಲ್ಲಿ ಘನ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಮಾಡಲು ಗ್ರಾಮ ಪಂಚಾಯತ ಪ್ರಯತ್ನಿಸಿದರೆ ಗ್ರಾಮಸ್ಥರು ಇದಕ್ಕೆ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಇದೇ ಸಂದರ್ಭದಲ್ಲಿ ಗ್ರಾಮಸ್ಥ ಶಂಕರ ನಾಯ್ಕ ಪುಟ್ಟನ ಮನೆ ಮಾತನಾಡಿ ‘ಒಂದು ಗ್ರಾಮದ ಅಭಿವೃದ್ಧಿಯ ವಿಚಾರದಲ್ಲಿ ಗ್ರಾಮಸ್ಥರು ಸಮರ್ಪಕವಾಗಿ ಸಲಹೆ ನೀಡಿದ್ದರು ಸಹ ಪಂಚಾಯತ ಪಿಡಿಓಗಳು ಅದನ್ನು ಧಿಕ್ಕರಿಸಿ ಕಾಮಗಾರಿಗೆ ಮುಂದಾಗಿರುವುದು ಸರಿಯಲ್ಲ. ಸರಕಾರಿ ಹಾಡಿಯ ಜಾಗದ ಪಕ್ಕದಲ್ಲಿಯೇ ಸ್ಮಶಾನ ಹಾಗೂ ಜನವಸತಿಗಳಿದ್ದರ ಬಗ್ಗೆ ತಿಳಿದು ನಮ್ಮೆಲ್ಲರ ವಿರೋಧವಿದ್ದರು ಮುಂದಾಗಿದ್ದಾರೆ. ಈ ಬಗ್ಗೆ ಗ್ರಾಮಸ್ಥರು ಜಿಲ್ಲಾಧಿಕಾರಿ ಹಾಗೂ ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿ ಮನವರಿಕೆ ಮಾಡಲಿದ್ದೇವೆ ಎಂದರು.
ವೀರಾಂಜನೇಯ ಯುವಕ ಸಂಘ ಅಧ್ಯಕ್ಷ ರಾಘು ನಾಯ್ಕ, ಗಣಪತಿ ನಾಯ್ಕ, ನಾಗೇಶ ನಾಯ್ಕ, ಚಿದು ನಾಯ್ಕ, ಈಶ್ವರ ನಾಯ್ಕ, ಮಂಜು ನಾಯ್ಕ, ಅಣ್ಣಪ್ಪ ನಾಯ್ಕ ಮುಂತಾದವರು ಇದ್ದರು.
ಇದೇ ಸಂದರ್ಭದಲ್ಲಿ ಗ್ರಾಮಸ್ಥರು ಸಹಾಯಕ ಆಯುಕ್ತೆ ಡಾ. ನಯನ ಎನ್ ಅವರಿಗೆ ಹಾಗೂ ಯಲ್ವಡಿಕವೂರ ಗ್ರಾಮ ಪಂಚಾಯತ್ ಪಿಡಿಓ ಗಳಿಗೆ ಘಟಕ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿ ಮನವಿ ಸಲ್ಲಿಸಿದರು.