ಶಿರಸಿ: ಕಲ್ಲಿ ಮೊರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿಗಳ ಪ್ರತಿಭಟನೆಗೆ ತಾತ್ಕಾಲಿಕ ಉಪಶಮನ; ವಿದ್ಯಾರ್ಥಿಗಳ ಸುರಕ್ಷತೆಗೆ ಧ್ವನಿ ಎತ್ತಿದ ಹಿತೇಂದ್ರ ನಾಯ್ಕ.

ಶಿರಸಿ: ಜಿಲ್ಲೆಯ ಪ್ರತಿಷ್ಠಿತ ಮತ್ತು ಹಳೆಯ ವಸತಿ ಶಾಲೆಯಾಗಿರುವ ಶಿರಸಿಯ ಬನವಾಸಿ ಸಮೀಪದ ಕಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಪ್ರಾಂಶುಪಾಲರ ವರ್ಗಾವಣೆ ಸಂಬಂಧ ಮಂಗಳವಾರ ವಿದ್ಯಾರ್ಥಿಗಳು ಮತ್ತು ಪಾಲಕರಿಂದ ಉಗ್ರ ಪ್ರತಿಭಟನೆ ನಡೆದು ಜಿಲ್ಲೆಯಾದ್ಯಂತ ಸಂಚಲನ ಮೂಡಿಸಿತ್ತು. ಪ್ರತಿಭಟನೆಯ ಕಾವು ಉಗ್ರರೂಪಕ್ಕೆ ತಾಳುತ್ತಿದ್ದಂತೆ ಹಳೆಯ ವಿದ್ಯಾರ್ಥಿಗಳು ಮತ್ತು ಪ್ರಭಾವಿ ಮುಖಂಡರು ವಿದ್ಯಾರ್ಥಿಗಳ ಸುರಕ್ಷತೆಯ ಬಗ್ಗೆ ಧ್ವನಿಯೆತ್ತಿದ್ದರು. ವಿದ್ಯಾರ್ಥಿಗಳ ಒತ್ತಡಕ್ಕೆ ಮಣಿದ ಸಂಬಂಧಿಸಿದ ಇಲಾಖೆಯ ಮುಖ್ಯ ಅಧಿಕಾರಿಗಳು ತಾತ್ಕಾಲಿಕವಾಗಿ ವಸತಿ ಶಾಲೆಯ ಹಿರಿಯ ಶಿಕ್ಷಕಿಯೋರ್ವರ್ವರನ್ನು ಪ್ರಭಾರಿ ಪ್ರಾಂಶುಪಾಲರನ್ನಾಗಿ ನೇಮಕ ಮಾಡಿದ್ದಾರೆ.
ನಡೆದಿದ್ದೇನು?
ಕಲ್ಲಿ ವಸತಿ ಶಾಲೆಯಲ್ಲಿ ಕಳೆದ ಹತ್ತು ವರ್ಷಗಳಿಂದ ರಾಘವೇಂದ್ರ ನಾಯ್ಕ್ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇವರ ಕರ್ತವ್ಯದ ಕುರಿತಂತೆ ಜನಪ್ರತಿನಿಧಿಗಳು, ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಇದೇ ಅವಧಿಯಲ್ಲಿ ಇಂಗ್ಲಿಷ್ ಶಿಕ್ಷಕರಾಗಿದ್ದ ಚಂದ್ರಶೇಖರ ನಾಯ್ಕ ಅವರ ವಿರುದ್ಧ ವಿದ್ಯಾರ್ಥಿಗಳು ಹಲವು ಬಾರಿ ಆಕ್ಷೇಪ ವ್ಯಕ್ತಪಡಿಸಿದ್ದರು. ನಿನ್ನೆಯ ಪ್ರತಿಭಟನೆಯಲ್ಲಿ ಲೈಂಗಿಕ ಕಿರುಕುಳದ ಆರೋಪವು ವ್ಯಕ್ತವಾಗಿತ್ತು. ಎಂಟು ತಿಂಗಳ ಹಿಂದೆ ಕಾರವಾರಕ್ಕೆ ವರ್ಗಾವಣೆಯಾಗಿದ್ದ ಚಂದ್ರಶೇಖರ ನಾಯ್ಕ ಇದೀಗ ಮತ್ತೆ ಕಲ್ಲಿ ವಸತಿ ಶಾಲೆಯ ಪ್ರಾಂಶುಪಾಲರಾಗಿ ನೇಮಕಗೊಂಡಿರುವುದು ವಿದ್ಯಾರ್ಥಿಗಳಲ್ಲಿ ಭಯದ ವಾತಾವರಣ ಮೂಡಿಸಿತ್ತು. ವಿದ್ಯಾರ್ಥಿಗಳಿಗೆ ಕೈಜೋಡಿಸಿದ ಪಾಲಕರು ನಮ್ಮ ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಮೊದಲಿನ ಪ್ರಾಂಶುಪಾಲರನ್ನು ಮುಂದುವರಿಸಿ ಇಲ್ಲವೇ ಈಗ ನೇಮಕವಾಗಿರುವ ಪ್ರಾಂಶುಪಾಲರನ್ನು ಹೊರತುಪಡಿಸಿ ಉಳಿದವರನ್ನು ನೇಮಿಸಿ ಎಂದು ಆಗ್ರಹಿಸಿದ್ದರು.

ಹಳೆಯ ವಿದ್ಯಾರ್ಥಿ ಪ್ರಭಾವಿ ಮುಖಂಡ ಹಿತೇಂದ್ರ ನಾಯ್ಕ ಬೆಂಬಲ.
ಪ್ರತಿಭಟನೆಯ ಸುದ್ದಿ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದ್ದಂತೆ ಹಳೆಯ ವಿದ್ಯಾರ್ಥಿಗಳು ಜನಪ್ರತಿನಿಧಿಗಳು ಮತ್ತು ಹಿರಿಯ ಅಧಿಕಾರಿಗಳ ಧೋರಣೆಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಕೆಲವರು ಹಿಂದಿನ ಅನುಭವಗಳನ್ನು ಹಂಚಿಕೊಂಡು ವಸತಿ ಶಾಲೆಯಲ್ಲಿ ಒಮ್ಮೆ ಭಯದ ವಾತಾವರಣ ನಿರ್ಮಾಣವಾದರೆ ಅದನ್ನು ಸರಿಪಡಿಸಲು ಸಾಧ್ಯವಾಗುವುದಿಲ್ಲ. ಅಲ್ಲದೆ ಪ್ರತಿಭಟನೆ ಅಥವಾ ಇನ್ಯಾವುದೋ ಸಂದರ್ಭದಲ್ಲಿ ವರ್ಷಕ್ಕೊಮ್ಮೆ ಬರುವ ಜನಪ್ರತಿನಿಧಿಗಳು ಹಿರಿಯ ಅಧಿಕಾರಿಗಳು ವಿದ್ಯಾರ್ಥಿಗಳ ಸಮಸ್ಯೆ ಆಲಿಸುವುದಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಂತೆ ಶಿರಸಿ ವಿಧಾನಸಭಾ ಕ್ಷೇತ್ರದಿಂದ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಿದ್ದ ಹಿತೇಂದ್ರ ನಾಯ್ಕ್ ವಿದ್ಯಾರ್ಥಿಗಳ ನೈಜ ಸಮಸ್ಯೆ ಗಮನಿಸಿ ಬೆಂಬಲಕ್ಕೆ ಧಾವಿಸಿದ್ದಾರೆ. ಇದೇ ವಸತಿ ಶಾಲೆಯ ಮೊದಲ ಬ್ಯಾಚ್ ವಿದ್ಯಾರ್ಥಿಯಾಗಿರುವ ಹಿತೇಂದ್ರ ನಾಯ್ಕ, ಜನಪ್ರತಿನಿಧಿಗಳು ತಮ್ಮ ರಾಜಕೀಯ ಮನಸ್ಥಿತಿಯನ್ನು ವಿದ್ಯಾರ್ಥಿ ಮನಸ್ಥಿತಿಗೆ ಹೋಲಿಸಬೇಡಿ. ಪ್ರಾಂಶುಪಾಲರ ವರ್ಗಾವಣೆಯಲ್ಲಿ ಮುಖ್ಯವಲ್ಲ. ವಿದ್ಯಾರ್ಥಿಗಳು ಯಾರನ್ನು ಕಂಡು ಭಯಭೀತರಾಗಿದ್ದಾರೆಯೋ ಅಥವಾ ಯಾರನ್ನು ವಿರೋಧಿಸುತ್ತಿದ್ದಾರೋ ಅವರನ್ನೇ ನೇಮಕ ಮಾಡುವುದು ಸಮಂಜಸವಲ್ಲ. ಭಯದ ವಾತಾವರಣದಲ್ಲಿ ಮುಕ್ತ ಕಲಿಕೆ ಸಾಧ್ಯವಿಲ್ಲ. ಇಲಾಖೆಯಲ್ಲಿ ಕಳಂಕ ರಹಿತ ಸಮರ್ಥ ಪ್ರಾಂಶುಪಾಲರಿಗೆ ಕೊರತೆ ಇಲ್ಲ ಅವರಲ್ಲಿ ಯಾರನ್ನಾದರೂ ನೇಮಿಸಬಹುದು. ಕಲ್ಲಿ ಶಾಲೆಗೆ ತನ್ನದೇಯಾದ ಗೌರವವಿದೆ. ಅದನ್ನು ಹಾಳುಮಾಡಬೇಡಿ. ವಿದ್ಯಾರ್ಥಿಗಳ ಮನಸ್ಸಿನಲ್ಲಿ ಮೂಡಿದ ಭಯವನ್ನು ಪರಿಗಣಿಸದೆ ನೇಮಕ ಮಾಡಿದರೆ ಮುಂದಾಗುವ ಅಪಾಯಗಳಿಗೆ ಹೊಣೆಗಾರರು ನೀವಾಗಿರುತ್ತೀರಿ. ಸೂಕ್ತ ತೀರ್ಮಾನ ಕೈಗೊಳ್ಳದೆ ಇದ್ದಲ್ಲಿ ಮುಂದಿನ ಪ್ರತಿಭಟನೆಗೆ ಕಾರಣವಾಗಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ದೂರದ ಬೆಂಗಳೂರಿನಲ್ಲಿದ್ದರೂ ವಿದ್ಯಾರ್ಥಿಗಳ ಸಮಸ್ಯೆಯನ್ನು ಆಲಿಸಿ ಬೆಂಬಲಿಸಿದ ಹಿತೇಂದ್ರ ನಾಯ್ಕ ಅವರಿಗೆ ಹಳೆಯ ವಿದ್ಯಾರ್ಥಿಗಳು ಬೆಂಬಲ ವ್ಯಕ್ತಪಡಿಸಿದ್ದಾರೆ. ರಾಜ್ಯ ಮಟ್ಟದ ಜನಪ್ರತಿನಿಧಿಗಳಿದ್ದರೂ ಸೂಕ್ತ ಸಮಯದಲ್ಲಿ ವಿದ್ಯಾರ್ಥಿಗಳ ಬೆಂಬಲಕ್ಕೆ ಬಾರದ ಇಲ್ಲವೇ ವೈಯಕ್ತಿಕ ಪ್ರತಿಷ್ಠೆಗಾಗಿ ವಿದ್ಯಾರ್ಥಿಗಳ ಹಿತವನ್ನು ನಿರ್ಲಕ್ಷಿಸುತ್ತಿರುವ ಜನಪ್ರತಿನಿಧಿಗಳ ಅಸಮರ್ಥತೆಗೆ ವಿಷಾದ ವ್ಯಕ್ತವಾಗಿದೆ.