ದಾಂಡೇಲಿ : ಉತ್ತರ ಕನ್ನಡ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯವನ್ನು ಮೆಚ್ಚಿ ಕಸಾಪ ರಾಜ್ಯಾಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿಯವರು ಪ್ರಶಂಸನಾ ಪತ್ರವನ್ನು ನೀಡಿರುವುದಕ್ಕೆ ಕಸಾಪ ಜಿಲ್ಲಾಧ್ಯಕ್ಷರಾದ ಬಿ.ಎನ್.ವಾಸರೆಯವರು ಹರ್ಷ ವ್ಯಕ್ತಪಡಿಸಿದ್ದಾರೆ.
ಅವರು ಇಂದು ಮಂಗಳವಾರ ಸಂಜೆ ನಗರದಲ್ಲಿ ಮಾಧ್ಯಮದ ಜೊತೆ ಮಾತನಾಡುತ್ತಾ, ನಾನು ಕಸಾಪ ಚುನಾವಣೆಯ ಸಂದರ್ಭದಲ್ಲಿಯೇ ಆಜೀವ ಸದಸ್ಯರ ಸಭೆ ಕರೆದು ವಾರ್ಷಿಕ ಲೆಕ್ಕ ನೀಡುವುದಾಗಿ ಹೇಳಿದ್ದೆ. ಅಂತೆಯೇ ಆಜೀವ ಸದಸ್ಯರ ಸಭೆ ಕರೆದು ಲೆಕ್ಕ ಒಪ್ಪಿಸಿದ್ದೆ. ಜಿಲ್ಲೆಯ ಎಲ್ಲಡೆಯಿಂದ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು. ಇನ್ನು ನಮ್ಮ ಈ ಕಾರ್ಯವನ್ನು ಮೆಚ್ಚಿ ನಮ್ಮ ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿಯವರು ಕಸಾಪ ರಾಜ್ಯ ಕಾರ್ಯಕಾರಿ ಸಮಿತಿಯಲ್ಲಿಯೂ ಉಲ್ಲೇಖಿಸಿ, ಅಭಿನಂದಿಸಿದ್ದರು. ಇದೀಗ ಉ.ಕ. ಜಿಲ್ಲಾ ಕಸಾಪ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಪ್ರಶಂಸನಾ ಪತ್ರ ನೀಡಿರುವುದು ನಮಗೆ ಇನ್ನಷ್ಟು ಖುಶಿ ತಂದಿದೆ. ಜಿಲ್ಲೆಯ ಕಸಾಪ ಇತಿಹಾಸದಲ್ಲಿಯೇ ಇಂತಹದ್ದೊಂದು ಪ್ರಶಂಸನಾ ಪತ್ರ ಮೊದಲ ಬಾರಿ ಬಂದಿದ್ದು, ಇದು ನಮ್ಮ ಜವಾಬ್ದಾರಿಯನ್ನು ಇನ್ನಷ್ಟು ಹೆಚ್ಚಿಸಿದೆ. ಇದು ನಮ್ಮ ಜಿಲ್ಲಾ ಸಮಿತಿಗೆ ಸಂದ ಗೌರವವಾಗಿದೆ ಎಂದು ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಎನ್. ವಾಸರೆ ತಿಳಿಸಿದ್ದಾರೆ.