ಜೋಯಿಡಾ ತಾಲ್ಲೂಕಿನಲ್ಲಿರುವ ಮೊಬೈಲ್ ನೆಟ್ವರ್ಕ್ ಸಮಸ್ಯೆಯನ್ನು ಬಗೆಹರಿಸುವಂತೆ – ರವಿ ರೇಡ್ಕರ್ ಮನವಿ

ಜೋಯಿಡಾ : ರಾಜ್ಯದಲ್ಲಿ ಭೌಗೋಳಿಕವಾಗಿ ಅತಿ ದೊಡ್ಡದಾದ ತಾಲೂಕು ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಪ್ರಕೃತಿ ಸೌಂದರ್ಯದ ಜೋಯಿಡಾ ತಾಲೂಕಿನ ತಾಲೂಕು ವ್ಯಾಪ್ತಿಯಲ್ಲಿ ಮೊಬೈಲ್ ನೆಟ್ವರ್ಕ್ ಸಮಸ್ಯೆ ಇದ್ದು, ತಾಲೂಕಿನ ಜನತೆಗೆ ಹಾಗೂ ತಾಲೂಕಿಗೆ ಆಗಮಿಸುವ ಪ್ರವಾಸಿಗರಿಗೆ ತೀವ್ರ ತೊಂದರೆಯಾಗುತ್ತಿದೆ. ಆದ್ದರಿಂದ ಕೂಡಲೇ ಮೊಬೈಲ್ ನೆಟ್ವರ್ಕ್ ಸಮಸ್ಯೆಯನ್ನು ಬಗೆಹರಿಸಿ ಕೊಡುವಂತೆ ಕೆಪಿಸಿಸಿಯ ರಾಜ್ಯ ಕಿಸಾನ್ ಘಟಕದ ಪ್ರಧಾನ ಕಾರ್ಯದರ್ಶಿ ರವಿ ರೇಡ್ಕರ್ ಅವರು ಮನವಿಯನ್ನು ಮಾಡಿದ್ದಾರೆ.

ಅವರು ಇಂದು ಮಂಗಳವಾರ ಮಧ್ಯಾಹ್ನ 2 ಗಂಟೆಗೆ ಜೋಯಿಡಾ ತಾಲೂಕು ಕೇಂದ್ರದಲ್ಲಿ ಮಾಧ್ಯಮದ ಜೊತೆ ಮಾತನಾಡುತ್ತಾ, ಎಂದು ಸರಕಾರದ ವಿವಿಧ ಸೌಲಭ್ಯಗಳನ್ನು ಪಡೆಯಲು ಮೊಬೈಲ್ ಅತಿ ಅವಶ್ಯಕವಾಗಿದೆ‌. ಸರಕಾರಿ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸುವ ಸಮಯದಲ್ಲಿ ಅರ್ಜಿ ಸಲ್ಲಿಸಿದ ಬಳಿಕ ಮುಂದಿನ ಪ್ರಕ್ರಿಯೆಗೆ ಮೊಬೈಲಿಗೆ ಬರುವ ಓಟಿಪಿ ಅತಿ ಅವಶ್ಯ. ಆದರೆ ಸಮರ್ಪಕ ನೆಟ್ವರ್ಕ್ ಇಲ್ಲದೇ ಇರುವುದರಿಂದ ಬಹಳಷ್ಟು ಸಮಸ್ಯೆಗಳು ಉಂಟಾಗಿ ಜನತೆಗೆ ತೊಂದರೆಯಾಗುತ್ತಿದೆ. ಇದರ ಹೊರತಾಗಿಯೂ ತಾಲೂಕಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದು, ನೆಟ್ವರ್ಕ್ ಸಮಸ್ಯೆಯಿಂದ ಪ್ರವಾಸಿಗರಿಗೂ ಕೂಡ ತೊಂದರೆಯಾಗುತ್ತಿದೆ. ಈ ನಿಟ್ಟಿನಲ್ಲಿ ತಾಲೂಕು ವ್ಯಾಪ್ತಿಯಲ್ಲಿ ಸಮರ್ಪಕ ನೆಟ್ವರ್ಕ್ ಸಿಗುವ ನಿಟ್ಟಿನಲ್ಲಿ ಅಗತ್ಯ ಕ್ರಮವನ್ನು ಸಂಬಂಧಪಟ್ಟವರು ಕೈಗೊಳ್ಳಬೇಕೆಂದು ರವಿ ರೇಡ್ಕರ್ ಅವರು ಮನವಿಯನ್ನು ಮಾಡಿದ್ದಾರೆ.