ದಾಂಡೇಲಿ: ಕನ್ನಡ ಸಾಹಿತ್ಯ ಪರಿಷತ್ತಿನ ಜಲ್ಲಾ ಮಟ್ಟದ ಆಜೀವ ಸದಸ್ಯರ ಸಭೆ ಕರೆದು ವಾರ್ಷಿಕ ಲೆಕ್ಕಪತ್ರ ಮಂಡಿಸಿದ ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕ್ಕೆ ಕಸಾಪ ರಾಜ್ಯಾಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಲಿಖಿತ ಪ್ರಶಂಸನಾ ಪತ್ರ ನೀಡಿ ಅಭಿನಂದಿಸಿದ್ದಾರೆ.
ಆಗಸ್ಟ್ 6 ರಂದು ದಾಂಡೇಲಿಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯರ ಸಭೆ ಕರೆದಿದ್ದ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆಯವರು ಆ ಸಭೆಯಲ್ಲಿ 2021-22 ಹಾಗೂ 2022-23 ನೇ ಸಾಲಿನ ಲೆಕ್ಕಪತ್ರವನ್ನು ಆಡಿಟ್ ವರದಿ ಸಹಿತ ಕಸಾಪ ಆಜೀವ ಸದಸ್ಯರು ಹಾಗೂ ಮಾಧ್ಯಮದವರ ಎದುರು ಮಂಡಿಸಿದ್ದರು. ಇದು ಆಜೀವ ಸದಸ್ಯರ ಹಾಗೂ ಜಿಲ್ಲೆಯ ಎಲ್ಲರ ಪ್ರಶಂಸೆಗೆ ಪಾತ್ರವಾಗಿತ್ತು. ಇದನ್ನು ಮಾದ್ಯಮಗಳ ವರದಿಯ ಮೂಲಕ ತಿಳಿದ ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿಯವರು ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯವನ್ನು ಶ್ಲಾಘಿಸಿ , ಅಭಿನಂದಿಸಿ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆಯವರಿಗೆ ಲಿಖಿತ ಪ್ರಶಂಸನಾ ಪತ್ರ ಬರೆದಿದ್ದಾರೆ.
ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಬಿ.ಎನ್. ವಾಸರೆಯವರ ಕಾರ್ಯವನ್ನು ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿಯವರು ಸ್ವಾಗತಿಸಿ,
ಅಭಿನಂದಿಸಿರುವುದರ ಜೊತೆಗೆ, ಇದು ರಾಜ್ಯದ ಎಲ್ಲ ಜಿಲ್ಲಾಧ್ಯಕ್ಷರಿಗೂ ಒಂದು ಮಾದರಿಯಾದ ಕಾರ್ಯವಾಗಿದೆ ಎಂದು ಪ್ರಶಂಸನಾ ಪತ್ರದಲ್ಲಿ ತಿಳಿಸಿದ್ದಾರೆ.
ಜವಾಬ್ದಾರಿ ಹೆಚ್ಚಿಸಿದೆ : ಬಿ.ಎನ್.ವಾಸರೆ
ನಾನು ಕಸಾಪ ಚುನಾವಣೆಯ ಸಂದರ್ಭದಲ್ಲಿಯೇ ಅಜೀವ ಸದಸ್ಯರ ಸಭೆ ಕರೆದು ವಾರ್ಷಿಕ ಲೆಕ್ಕ ನೀಡುವುದಾಗಿ ಹೇಳಿದ್ದೆ. ಅಂತೆಯೇ ಆಜೀವ ಸದಸ್ಯರ ಸಭೆ ಕರೆದು ಲೆಕ್ಕ ಒಪ್ಪಿಸಿದ್ದೆ. ಜಿಲ್ಲೆಯ ಎಲ್ಲಡೆಯಿಂದ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು. ಇನ್ನು ನಮ್ಮ ಈ ಕಾರ್ಯವನ್ನು ಮೆಚ್ಚಿ ನಮ್ಮ ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿಯವರು ಕಸಾಪ ರಾಜ್ಯ ಕಾರ್ಯಕಾರಿ ಸಮಿತಿಯಲ್ಲಿಯೂ ಉಲ್ಲೇಖಿಸಿ, ಅಭಿನಂದಿಸಿದ್ದರು. ಇದೀಗ ಉ.ಕ. ಜಿಲ್ಲಾ ಕಸಾಪ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಪ್ರಶಂಸನಾ ಪತ್ರ ನೀಡಿರುವುದು ನಮಗೆ ಇನ್ನಷ್ಟು ಖುಶಿ ತಂದಿದೆ. ಜಿಲ್ಲೆಯ ಕಸಾಪ ಇತಿಹಾಸದಲ್ಲಿಯೇ ಇಂತಹದ್ದೊಂದು ಪ್ರಶಂಸನಾ ಪತ್ರ ಮೊದಲ ಬಾರಿ ಬಂದಿದ್ದು, ಇದು ನಮ್ಮ ಜವಾಬ್ದಾರಿಯನ್ನು ಇನ್ನಷ್ಟು ಹೆಚ್ಚಿಸಿದೆ. ಇದು ನಮ್ಮ ಜಿಲ್ಲಾ ಸಮಿತಿಗೆ ಸಂದ ಗೌರವವಾಗಿದೆ ಎಂದು ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಎನ್. ವಾಸರೆ ತಿಳಿಸಿದ್ದಾರೆ.