‘ಮಹಿಳೆಯಾಗಿ ಹುಟ್ಟುವಾಗಲೇ ಆಕೆ ದೇವಿಯ ಸ್ವರೂಪ’ – ರಾಘವೇಶ್ವರ ಶ್ರೀ

ಗೋಕರ್ಣ: ಮಹಿಳೆಯ ಮಾತೃತ್ವವನ್ನು ಗೌರವಿಸುವುದು ಸಮಾಜದ ಪ್ರತಿಯೊಬ್ಬರ ಕರ್ತವ್ಯ ಎಂದು ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ನುಡಿದರು. ಅಶೋಕೆಯ ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಆವರಣದಲ್ಲಿ ಕೈಗೊಂಡಿರುವ ಗುರುಕುಲ ಚಾತುರ್ಮಾಸ್ಯದ ಅಂಗವಾಗಿ ಭಾನುವಾರ ನಡೆದ ಮಾತೃ ಸಮಾವೇಶದಲ್ಲಿ ಅವರು ಆಶೀರ್ವಚನ ನೀಡಿದರು.

ಮಹಿಳೆಯಾಗಿ ಹುಟ್ಟುವಾಗಲೇ ಆಕೆ ದೇವಿಯ ಸ್ವರೂಪವಾಗಿ ಹುಟ್ಟುತ್ತಾಳೆ. ಹೆಣ್ಣನ್ನು ನೋಯಿಸುವ ಹಕ್ಕು ಯಾರಿಗೂ ಇಲ್ಲ. ಅದು ಅತ್ಯಂತ ಪಾಪದ ಕಾರ್ಯ. ಆಕೆ ಕಣ್ಣೀರು ಇಟ್ಟರೆ ಅದು ಶಾಪ. ಮಹಿಳೆ ಸಂತೋಷವಾಗಿದ್ದರೆ ಮಾತ್ರ ಶ್ರೇಯಸ್ಸು ಎಂದು ಬಣ್ಣಿಸಿದರು.

ಜಗತ್ತಿನಲ್ಲಿ ಪುರುಷ ಏನು ಬೇಕಾದರೂ ಆಗಬಹುದು; ಆದರೆ ಮಾತೆ ಆಗಲಾರ. ಆದ್ದರಿಂದ ಪುರುಷ ಸಾಧಿಸುವ ಯಾವುದೇ ಯಶಸ್ಸಿನ ಕೀರ್ತಿ ಆತನನ್ನು ಹೊತ್ತು ಹೆತ್ತು ಸಲಹಿದ ಮಾತೆಗೆ ಸಲ್ಲಬೇಕು ಎಂದು ಹೇಳಿದರು. ಆದರೆ ಮಾತೃಶಕ್ತಿಯ ಸ್ವರೂಪ ಅಡಿಗಲ್ಲಿನಂತೆ. ರಾಮನಷ್ಟು ಕೌಸಲ್ಯೆ, ಕೃಷ್ಣನಷ್ಟು ಯಶೋಧೆ ಮುನ್ನಲೆಗೆ ಬಂದಿಲ್ಲ ಎಂದು ಮಾರ್ಮಿಕವಾಗಿ ನುಡಿದರು.

ಮಾತೃ ಸಮಾವೇಶ ಅಂಗವಾಗಿ ಛಾತ್ರಭಿಕ್ಷೆ ಎಂಬ ವಿಶೇಷ ಕಾರ್ಯಕ್ರಮ ನಡೆಯಿತು. ಇಲ್ಲಿ ಕಲಿಯುವ ವಟುಗಳಿಗೆ ಮಾತೆಯನ್ನು ಭಿಕ್ಷಾಸೇವೆ ನೆರವೇರಿಸಿದರು. ಮಾತೃತ್ವಮ್ ಅಧ್ಯಕ್ಷೆ ಈಶ್ವರಿ ಬೇರ್ಕಡವು, ಕಾರ್ಯದರ್ಶಿ ದೇವಿಕಾ ಶಾಸ್ತ್ರಿ ಮತ್ತಿತರರು ಇದ್ದರು.