ಜೋಯಿಡಾ : ತಾಲ್ಲೂಕಿನ ಡೇರಿಯೋ ಗ್ರಾಮಕ್ಕೆ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಅವರು ಸೋಮವಾರ ಸಂಜೆ ಭೇಟಿ ನೀಡಿ ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸಿದರು.
ತಾನೋರ್ವ ಜಿಲ್ಲಾಧಿಕಾರಿಯೆನ್ನುವುದನ್ನು ಮರೆತು ಈ ದೇಶದ ಸಾಮಾನ್ಯ ಪ್ರಜೆ ಎಂಬಂತೆ ಸ್ಥಳೀಯ ಗ್ರಾಮಸ್ಥರ ಯೋಗಕ್ಷೇಮವನ್ನು ವಿಚಾರಿಸಿ, ಸಮಸ್ಯೆಗಳನ್ನು ಅತ್ಯಂತ ಪ್ರೀತಿ ಮತ್ತು ಕಾಳಜಿಯಿಂದ ಆಲಿಸುವ ಮೂಲಕ ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುವ ಅಧಿಕಾರಿಯಾಗಿ ಸ್ಥಳೀಯ ಗ್ರಾಮಸ್ಥರ ಮೆಚ್ಚುಗೆ ಮತ್ತು ಅಭಿಮಾನಕ್ಕೆ ಗಂಗೂಬಾಯಿ ಮಾನಕರ ಅವರು ಪಾತ್ರರಾದರು.

ಇದಕ್ಕೂ ಮುನ್ನ ಜೋಯಿಡಾ ತಹಶೀಲ್ದಾರ್ ಕಾರ್ಯಾಲಯಕ್ಕೆ ಭೇಟಿ ನೀಡಿ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದರು. ತಹಶೀಲ್ದಾರ್ ಕಾರ್ಯಾಲಯದ ಹತ್ತಿರದಲ್ಲಿ ನಿರ್ಮಾಣಗೊಳ್ಳುತ್ತಿರುವ ತಾಲೂಕು ಆಡಳಿತ ಸೌಧ ಕಟ್ಟಡವನ್ನು ವೀಕ್ಷಣೆ ಮಾಡಿದರು. ಅದೇ ರೀತಿ ತಾಲೂಕಿನಲ್ಲಿ ನಡೆಯುತ್ತಿರುವ ವಿವಿಧ ಕಾಮಗಾರಿಗಳನ್ನು ವೀಕ್ಷಿಸಿದರು.
ಈ ಸಂದರ್ಭದಲ್ಲಿ ಸಹಾಯಕ ಆಯುಕ್ತ ಜಯಲಕ್ಷ್ಮಿ ರಾಯಕೋಡ, ತಹಶೀಲ್ದಾರ್ ರಾಜೇಶ್ ಚೌಹ್ವಾಣ್, ಉಪ ತಹಸಿಲ್ದಾರರಾದ ಸಂಜೀವ್ ಭಜಂತ್ರಿ ಮತ್ತು ಸುರೇಶ್ ಒಕ್ಕುಂದ, ಕಂದಾಯ ನಿರೀಕ್ಷಕರಾದ ಗಣಪತಿ ಮೇತ್ರಿ ಮತ್ತು ಮಂಜುನಾಥ್ ಸೆರಿದಂತೆ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.




