ನೀರಿಲ್ಲದೇ ಮುಗಿಲತ್ತ ದೃಷ್ಟಿ ನೆಟ್ಟ ಅನ್ನದಾತ.!

ಸಿದ್ದಾಪುರ: ಇಷ್ಟುದಿನ ಅಬ್ಬರಿಸಿ ಬೊಬ್ಬಿರಿದ ಮಳೆರಾಯ ಕಳೆದ ಕೆಲ ದಿನಗಳಿಂದ ಮರೆಯಾಗಿದ್ದಾನೆ. ಹೀಗಾಗಿ ಗದ್ದೆನಾಟಿ ಮಾಡಲು ನೀರಿಲ್ಲದೇ ಅನ್ನದಾತರು ಮುಗಿಲತ್ತ ದೃಷ್ಟಿ ನೆಟ್ಟಿದ್ದಾರೆ.

ಜುಲೈ 20 ರವರೆಗೆ ಭಾರೀ ಮಳೆ ಸುರಿದಿದ್ದರಿಂದ ಬಹುತೇಕ ಕಡೆ ಕೃಷಿ ಭೂಮಿ ಜಲಾವೃತಗೊಂಡು ನಾಟಿ ಕಾರ್ಯಕ್ಕೆ ಅಡ್ಡಿಯಾಗಿತ್ತು. ಇದೀಗ ಮಳೆ ಬಿಡುವು ನೀಡಿದ್ದು ತಾಲೂಕಿನ ವಿವಿಧೆಡೆ ಗದ್ದೆ ನಾಟಿ ಮಾಡಲು ನೀರಿಲ್ಲದೇ ರೈತರು ಪರಿತಪಿಸುತ್ತಿದ್ದಾರೆ.

ಸಿದ್ದಾಪುರ ತಾಲೂಕಿನ ಬೇಡ್ಕಣಿ, ಕೆರೆಮಠ, ಗುಂಜಗೋಡ, ತ್ಯಾರ್ಸಿ, ಕಡಕೇರಿ, ಹೊಸೂರ, ಕೊಂಡ್ಲಿ, ಕೋಲಶಿರ್ಸಿ, ಅವರಗುಪ್ಪಾ, ಕುಣಜಿ, ನಿಡಗೋಡ, ಮಂಡ್ಳಿಕೊಪ್ಪ, ಕಾನಗೋಡ, ಐಗೋಡ, ಬಾಲಿಕೊಪ್ಪ, ಬಿಕ್ಕಳಸೆ, ಶಿರಳಗಿ, ಹಲಗೇರಿ, ಸುಂಕತ್ತಿ, ಮೆಣಸಿ ಸೇರಿದಂತೆ ಬಹುತೇಕ ಕಡೆ ಮಕ್ಕಿ ಗದ್ದೆಗಳಲ್ಲಿ ನೀರಿಲ್ಲದೇ ನಾಟಿ ಕಾರ್ಯ ಸ್ಥಗಿತಗೊಂಡಿದೆ.

ಮಳೆ ಇಲ್ಲದೇ ಗದ್ದೆಗಳಿಗೆ ಪಂಪ್ ನಿಂದ ನೀರು.!

ತಾಲೂಕಿನ ಹಲವೆಡೆ ನಾಟಿ ಮಾಡಲು ನೀರಿಲ್ಲದ ಕಾರಣ ರೈತಾಪಿ ಸಮುದಾಯ ಪಂಪ್ ಸೆಟ್ ಬಳಸಿ ಬಾವಿ, ಕೆರೆ ಮತ್ತಿತರ ಜಲಮೂಲಗಳಿಂದ ಗದ್ದೆಗೆ ನೀರು ಹಾಯಿಸುತ್ತಿದ್ದಾರೆ. ಕಳೆದ ಹತ್ತು ದಿನಗಳಿಂದ ವರುಣ ಬಿಡುವು ನೀಡಿದ್ದರಿಂದ ಗದ್ದೆಗಳು ಒಣಗಿಹೋಗಿವೆ. ಈಗಾಗಲೇ ನಾಟಿ ಮಾಡಿರುವ ಗದ್ದೆಗಳಲ್ಲೂ ಸಹ ನೀರಿಲ್ಲದೇ ಭತ್ತದ ಸಸಿ ಒಣಗುತ್ತಿದ್ದು, ಕೃಷಿಕ ಸಮುದಾಯ ಮಳೆಗಾಗಿ ಆಗಸದತ್ತ ದೃಷ್ಟಿ ಹಾಯಿಸಿ ಪ್ರಾರ್ಥಿಸುತ್ತಿದ್ದಾರೆ.