ಟ್ರಾಲಿಯ ರೋಪ್ ತುಂಡಾಗಿ ರಸ್ತೆಯಲ್ಲಿ ಹೋಗುತ್ತಿದ್ದ ಇಬ್ಬರು ವಿದ್ಯಾರ್ಥಿಗಳಿಗೆ ಗಂಭೀರ ಗಾಯ


ಅಂಕೋಲಾ: ಪಟ್ಟಣದ ನೀಲಂಪುರ ಕ್ರಾಸ್ ಬಳಿ ಅತಿವೇಗದಿಂದ ಚಲಿಸುತ್ತಿದ್ದ ಟ್ರಾಲಿ ಲಾರಿಯ ಹಗ್ಗ ತುಂಡಾಗಿ ಅದರಲ್ಲಿನ ಕಬ್ಬಿಣದ ಸಲಾಕೆಗಳು ಕೆಳಗೆ ಉರುಳಿದ್ದರಿಂದ ರಾಷ್ಟ್ರೀಯ ಹೆದ್ದಾರಿಯ ಅಂಚಿನಲ್ಲಿ ಸಾಗುತ್ತಿದ್ದ ವಿದ್ಯಾರ್ಥಿಗಳಿಬ್ಬರಿಗೆ ಗಂಭೀರ ಗಾಯವಾದ ಘಟನೆ ನಡೆದಿದೆ. ವಿದ್ಯಾರ್ಥಿಗಳನ್ನು ತಾಲೂಕ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನಡೆಸಲಾಯಿತು.
ಹಾವೇರಿ ನಿವಾಸಿಗಳಾದ ದರ್ಶನ ಕೆಂಚಪ್ಪ ಕಂಡೋಜಿ (12) ಕಿರಣ ಹನುಮಂತಪ್ಪ ಮೇಗಲಮನೆ (12) ಗಾಯಗೊಂಡ ವಿದ್ಯಾರ್ಥಿಗಳು. ಅಜ್ಜಿಕಟ್ಟಾ ಸರ್ಕಾರಿ ಶಾಲೆಯ 6 ನೇ ತರಗತಿ ವಿದ್ಯಾರ್ಥಿಗಳಾದ ಇವರು ತರಗತಿ ಮುಗಿದ ನಂತರ ಹೆದ್ದಾರಿ ಪಕ್ಕದ ಕಚ್ಚಾರಸ್ತೆ ಮೂಲಕ ಬಾಳೇಗುಳಿ – ವಿಠಲ ಘಾಟ ಬಳಿ ಇರುವ ಮೆಟ್ರಿಕ್ ಪೂರ್ವ ಬಾಲಕರ ವಸತಿನಿಲಯಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.
ಲಾರಿಯಲ್ಲಿ ಕಬ್ಬಿಣದ ಸರಕು ತುಂಬಿಕೊಂಡು ಅಂಕೋಲಾ ಮಾರ್ಗವಾಗಿ ಮಂಗಳೂರು ಕಡೆ ಸಾಗುತ್ತಿದ್ದ ವೇಳೆ ಸರಕುಗಳಿಗೆ ಕಟ್ಟಿದ್ದ ಹಗ್ಗ ತುಂಡಾಗಿ ಅದರಲ್ಲಿದ್ದ ಕಬ್ಬಿಣದ ಚೌಕಟ್ಟುಗಳು ರಸ್ತೆ ಬದಿಯಲ್ಲಿ ನಡೆದು ಹೋಗುತ್ತಿದ್ದ ವಿದ್ಯಾರ್ಥಿಗಳ ಮೇಲೆ ಬಿದ್ದಿದೆ.
ಸ್ಥಳಕ್ಕೆ ಭೇಟಿ ನೀಡಿದ ಪಿ.ಎಸ್. ಐ ಉದ್ದಪ್ಪ ಧರೆಪ್ಪನವರ್ ಮತ್ತು ಸುನೀಲ ಹುಲ್ಲೊಳ್ಳಿ ಗಾಯಾಳು ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ಸಾಗಿಸಲು ಮಾಗದರ್ಶನ ಮಾಡಿದರು. ಎನ್ ಎಚ್ ಐ ಹಾಗೂ ಇಲಾಖಾ ಸಿಬ್ಬಂದಿಗಳಿಗೆ ಮಾರ್ಗದರ್ಶನ ನೀಡಿ ಸಂಚಾರ ಸುರಕ್ಷತೆಗೆ ಕ್ರಮ ಕೈಗೊಂಡರು.

ಪೊಲೀಸ್ ನಿರೀಕ್ಷಕ ಸಂತೋಷ ಶೆಟ್ಟಿ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ವಿದ್ಯಾರ್ಥಿಗಳ ಆರೋಗ್ಯದ ಕುರಿತು ಮಾಹಿತಿ ಪಡೆದರು. ಘಟನೆಗೆ ಸಂಬಂಧಿಸಿ ಟ್ರಾಲಿ ಚಾಲಕ ಮಹಾರಾಷ್ಟ್ರದ ಕೋಲಾಪುರ ನಿವಾಸಿ ವಿಜಯ ಬಲಭೀಮ ಡೊರೊಲೆ ಎಂಬಾತನ ಮೇಲೆ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ