ಅಂಕೋಲಾ : ಮಳೆಗಾಲದ ಸಂದರ್ಭದಲ್ಲಿ ಜಲ ಮೂಲಗಳು ಕಲುಷಿತಗೊಂಡಿರುತ್ತವೆ. ಅಲ್ಲದೆ ಈ ಸಮಯದಲ್ಲಿ ಸಾಂಕ್ರಾಮಿಕ ರೋಗಗಳೂ ಉದ್ಭವಗೊಳ್ಳುತ್ತವೆ. ಹೀಗಾಗಿ ಶಾಲೆ ಕಾಲೇಜುಗಳಿಗೆ ಮತ್ತು ಸಾರ್ವಜನಿಕರಿಗೆ ಪೂರೈಕೆಯಾಗುವ ಕುಡಿಯುವ ನೀರಿನ ಸಂಗ್ರಹಣೆಯ ಟ್ಯಾಂಕುಗಳನ್ನು ಆಗಾಗ ಪರಿಶಿಲಿಸಿ ಸ್ವಚ್ಛತೆಗೆ ಆದ್ಯತೆ ನೀಡಿ ಎಂದು ತಾ.ಪಂ.ಆಡಳಿತಾಧಿಕಾರಿಗಳಾದ ನಾಗೇಶ ರಾಯ್ಕರ ಹೇಳಿದರು. ಅವರು ತಾ.ಪಂ.ಸಭಾಭವನದಲ್ಲಿ ನಡೆದ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಕಲುಷಿತ ನೀರಿನ ಸೇವನೆಯಿಂದ ಆರೋಗ್ಯ ಸಮಸ್ಯೆ ಉಂಟಾದ ಬಗ್ಗೆ ರಾಜ್ಯದ ಕೆಲವು ಕಡೆಯಿಂದ ವರದಿಯಾಗಿರುವ ಹಿನ್ನೆಲೆಯಲ್ಲಿ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ, ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ ಮತ್ತು ಪುರಸಭೆ ಅಧಿಕಾರಿಗಳಿಗೆ ಈ ಕುರಿತು ಸೂಚನೆ ನೀಡಿದರು. ಕುಡಿಯುವ ನೀರು ಪೂರೈಕೆ ಇಲಾಖೆಯ ಬಾಲು ಇಲಾಖೆಯ ಪರವಾಗಿ ಮಾಹಿತಿ ನೀಡುತ್ತ ಕುಡಿಯುವ ನೀರು ಪೂರೈಕೆಯ ಪೈಪಲೈನ್ ಕಾಮಗಾರಿಗಳು ಬಹುತೇಕ ಪೂರ್ಣಗೊಂಡಿದ್ದು ಇನ್ನು ಹೆಚ್ಚುವರಿ ಕಾಮಗಾರಿಗಳು ಜಲಮೂಲದ ಸಮಸ್ಯೆಯಿಂದ ಅನುಷ್ಠಾನಗೊಳಿಸಲು ವಿಳಂಬವಾಗಿದೆ ಎಂದರು. ಕೆಲವು ಗ್ರಾಮಗಳಿಗೆ ಪೂರೈಕೆಯಾಗುವ ಜಲಮೂಲವಾದ ಗಂಗಾವಳಿಯ ನದಿಯ ಶಿರಗುಂಜಿ ಪ್ರದೇಶದ ಹಿನ್ನೀರಿನಲ್ಲಿ ಸಮುದ್ರದ ಉಪ್ಪುನೀರಿನ ಅಂಶ ಸೇರುವದರಿಂದ ಅದನ್ನು ಹೊನ್ನಳ್ಳಿಗೆ ವರ್ಗಾಯಿಸಲಾಗಿದೆ ಎಂದರು.
ತಾಲೂಕಿನಲ್ಲಿ ಕಳೆದ ಸಾಲಿಗೆ ಹೋಲಿಸಿದರೆ ಈ ಅವಧಿಯಲ್ಲಿ 350ಮಿ.ಮೀ ಕಡಿಮೆ ಪ್ರಮಾಣದ ಮಳೆಯಾಗಿದೆ. ಸುಮಾರು 769 ಕ್ವಿಂ ಬೀಜವನ್ನು ರೈತರಿಗೆ ಪೂರೈಸಲಾಗಿದೆ. ನೀರಿನ ಲಭ್ಯತೆ ಇರುವಾಗಲೇ ನಾಟೀ ಕಾರ್ಯ ಹೆಚ್ಚುಕಡಿಮೆ ಮುಗಿದಿದ್ದು ಎತ್ತರದ ಪ್ರದೇಶಗಳಲ್ಲಿ ಸಧ್ಯ ಮಳೆಯ ಅಭಾವದಿಂದ ನಾಟೀ ಕಾರ್ಯಕ್ಕೆ ಹಿನ್ನಡೆಯಾಗಿದೆ. ತಾಲೂಕಿನಲ್ಲಿ 3850 ಹೆಕ್ಟೇರನ ಪೈಕಿ 3260 ಹೆಕ್ಟೇರ ಪ್ರದೇಶದಲ್ಲಿ ಕೃಷಿಯನ್ನು ಕೈಗೊಳ್ಳಲಾಗಿದೆ ಎಂದು ತಾಲೂಕಾ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಶ್ರೀಧರ ನಾಯ್ಕ ತಿಳಿಸಿದರು.
ಪಶು ವೈದ್ಯಕೀಯ ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯ ಸಮಸ್ಯೆ ಮುಂದುವರೆದಿದ್ದು ಸಧ್ಯದಲ್ಲೇ ತಾಲೂಕಿಗೆ ಹೊಸದಾಗಿ ವೈದ್ಯರೊಬ್ಬರು ಅಧಿಕಾರ ವಹಿಸಿಕೊಳ್ಳಲಿದ್ದಾರೆ. ತಾಂತ್ರಿಕ ವಿಭಾಗದಲ್ಲಿ 27 ಮಂಜೂರಿ ಹುದ್ದೆ ಇದ್ದರೂ ಹಾಲಿ ಮೂವರು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಪಶು ವೈದ್ಯಕೀಯ ಇಲಾಖೆಯ ಅಧಿಕಾರಿ ಮಾಹಿತಿ ನೀಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಮಾತನಾಡಿ ಪಠ್ಯ ಪುಸ್ತಕ ಮತ್ತು ಸಮವಸ್ತ್ರದ ವಿತರಣೆ ಪೂರ್ಣಗೊಂಡಿದೆ ನಿಗದಿತ ಕ್ರಮದಂತೆ ತರಗತಿಗಳು ನಡೆಯುತ್ತಿವೆ. ಶೂಗಳಿಗೆ ಅನುದಾನ ಬಿಡುಗಡೆಯಾಗಿದೆ. ಗಣಿ ಬಾಧಿತ ಶಾಲೆಗಳ ಸೌಕರ್ಯಗಳಿಗಾಗಿ ಅಗತ್ಯ ಕ್ರಮ ವಹಿಸಲಾಗಿದೆ ಎಂದರು. ಹಾಗೂ ವಾರಕ್ಕೆ ಎರಡು ದಿನ ವಿದ್ಯಾರ್ಥಿಗಳಿಗೆ ಮೊಟ್ಟೆ ಪೂರೈಸುವ ಯೋಜನೆಗೆ ಚಾಲನೆ ನೀಡಲಾಗುತ್ತಿದೆ ಎಂದರು.
ಆರೋಗ್ಯ ಇಲಾಖೆಯಲ್ಲಿ ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ಇಂದ್ರಧನುಷ ಯೋಜನೆಯನ್ನು ಯಶಸ್ವಿಗೊಳಿಸಲು ಕಾರ್ಯತಂತ್ರ ರೂಪಿಸಲಾಗಿದೆ. ಡಯಾಲಿಸಿಸ್ ಚಿಕಿತ್ಸೆಯ ಕ್ರಮದಲ್ಲಿ ಯಾವುದೇ ಸಮಸ್ಯೆ ಇಲ್ಲ ಆದರೆ ತಾಲೂಕಾ ಆಸ್ಪತ್ರೆಯಲ್ಲಿ ಸ್ತ್ರೀರೋಗ ತಜ್ಞರು ಲಭ್ಯವಿಲ್ಲದ್ದರಿಂದ ಸಾರ್ವಜನಿಕರಿಗೆ ಸಮಸ್ಯೆಯಾಗುತ್ತಿದೆ ಎಂದು ತಾಲೂಕಾ ಆರೋಗ್ಯಾಧಿಕಾರಿ ಡಾ.ಜಗದೀಶ ನಾಯ್ಕ ಹಾಗೂ ವೈದ್ಯಾಧಿಕಾರಿ ಡಾ. ಸಂತೋಷ ಮಾಹಿತಿ ನೀಡಿದರು.
ತಾಲೂಕಿನಲ್ಲಿ ರಾಜ್ಯ ಸರಕಾರದ ಗೃಹಲಕ್ಷ್ಮೀ ಯೋಜನೆಗೆ ಶೇ.83% ರಷ್ಟು ಅರ್ಹ ಫಲಾನುಭವಿಗಳು ನೋಂದಣಿ ಮಾಡಿಕೊಂಡಿದ್ದು ಉಳಿದ ಶೇ.17% ರಷ್ಟು ಫಲಾನುಭವಿಗಳನ್ನೂ ಅಂಗನವಾಡಿ ಕಾರ್ಯಕರ್ತರ ಮೂಲಕ ಸಂಪರ್ಕಿಸಿ ನೋಂದಣಿ ಮಾಡಿಸಲಾಗುವದು ಎಂದು ಶಿಶು ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ತಿಳಿಸಿದರು.
ಸಭೆಯಲ್ಲಿ ಸಾರಿಗೆ ಇಲಾಖೆ, ಪುರಸಭೆ, ಪಂಚಾಯತ ರಾಜ್, ಕಿರು ನೀರಾವರಿ, ಅಬಕಾರಿ, ಅರಣ್ಯ, ಮೀನುಗಾರಿಕೆ, ಕಾರ್ಮಿಕ ಇಲಾಖೆ ಮುಂತಾದ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದು ಮಾಹಿತಿ ನೀಡಿದರು.
ತಾ.ಪಂ. ಪ್ರಭಾರಿ ಕಾರ್ಯನಿರ್ವಹಣಾಧಿಕಾರಿ ಸುನೀಲ ಎಂ ಸ್ವಾಗತಿಸಿ ನಿರ್ವಹಿಸಿದರು.