ಬೆಂಗಳೂರು: ವಿಧಾನ ಪರಿಷತ್ಗೆ ಸಮಾಜ ಸೇವೆಯಿಂದ ಸುಧಾಮ್ ದಾಸ್ ಅವರ ಹೆಸರನ್ನು ಮುಖ್ಯಮಂತ್ರಿ Siddaramaiah ಅವರು ರಾಜ್ಯಪಾಲರಿಗೆ ಶಿಫಾಸರಸ್ಸು ಮಾಡಿದ ಬೆನ್ನಲ್ಲೇ ಪಕ್ಷದೊಳಗೆಯೇ ವಿರೋಧ ವ್ಯಕ್ತವಾಗಿದೆ. ಈ ವಿಚಾರವಾಗಿ ಸಂಸದ ಡಿಕೆ ಸುರೇಶ್ ಮಾತನಾಡಿ ನನ್ನ ಹೆಸರಿಗೂ ವಿರೋಧ ಇದೆಯಪ್ಪ. ಎಲ್ಲವನ್ನು ಹೈಕಮಾಂಡ್, ಪಕ್ಷ ತೀರ್ಮಾನ ಮಾಡುತ್ತದೆ ಎಂದು ಹೇಳಿದರು. ಈ ಮೂಲಕ ಬರುವ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಪಕ್ಷದಲ್ಲೇ ವಿರೋಧ ವ್ಯಕ್ತವಾಗುತ್ತಿದೆಯಾ ಎಂಬ ಚರ್ಚೆ ರಾಜಕೀಯ ಪಡಸಾಲೆಯಲ್ಲಿ ನಡೆಯುತ್ತಿದೆ.
ಬೆಂಗಳೂರಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಗುತ್ತಿಗೆದಾರರು ಎರಡೂವರೆ ವರ್ಷದಿಂದ ಬಿಲ್ ಪೆಂಡಿಂಗ್ ಇದೆ ಅಂದಿದ್ದಾರೆ. ಕೆಲಸ ಮಾಡಿದವರಿಗೆ ಹಣ ಸಿಗುತ್ತದೆ ಎಂದು ಸರ್ಕಾರವೇ ಸ್ಪಷ್ಟಪಡಿಸಿದೆ. ಕಳಪೆ ಕಾಮಗಾರಿಗೆ 40% ಕಮಿಷನ್ ಕಾರಣ ಎಂಬ ಆರೋಪಗಳಿತ್ತು. ಹೀಗಾಗಿ ತನಿಖೆ ಮಾಡಿ ಹಣ ಬಿಡುಗಡೆ ಮಾಡುವುದಾಗಿ ಸಿಎಂ ಡಿಸಿಎಂ ಹೇಳಿದ್ದಾರೆ ಎಂದು ತಿಳಿಸಿದರು.
ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ ಆರೋಪಗಳ ವಿಚಾರವಾಗಿ ಮಾತನಾಡಿದ ಅವರು ಪ್ರಚಾರಕ್ಕಾಗಿ ಆರೋಪ ಮಾಡಿದರೆ ನಾವು ಏನು ಮಾಡುವುದಕ್ಕೆ ಆಗುವುದಿಲ್ಲ. ಭ್ರಷ್ಟಾಚಾರ ಆರೋಪ ಮಾಡಿ ಪ್ರಚಾರದಲ್ಲಿ ಇರಬೇಕು ಅಂತ ಕೆಲವರು ಬಯಸಿದರೆ ಏನು ಮಾಡುವುದಕ್ಕಾಗುವುದಿಲ್ಲ. ಇರಿಗೇಷನ್, ಪಿಡಬ್ಲ್ಯೂಡಿ ಸೇರಿ ಯಾವ ಇಲಾಖೆಯಲ್ಲೂ ಹಣ ಕೊಟ್ಟಿಲ್ಲ. ಗುತ್ತಿಗೆದಾರರನ್ನು ರಾಜಕೀಯಕ್ಕೆ ಬಳಸಿಕೊಂಡರೂ ತಪ್ಪೇನಿಲ್ಲ ಎಂದರು.
ಕ್ಷೇತ್ರಕ್ಕೆ ಹೋಗಲು ಆಗುವುದಿಲ್ಲ ಈಗ, ಅವರು ಇನ್ನು ನಾಲ್ಕು ವರ್ಷ ಬಿಟ್ಟೇ ಕ್ಷೇತ್ರಕ್ಕೆ ಹೋಗುವುದು. ಇಲ್ಲಿಯೇ ಇದ್ದು ಏನಾದರೂ ಮಾಡಬೇಕಲ್ಲ ಅವರು. ಕೆಲಸ ಇಲ್ಲದಾಗ ರಾಜಕೀಯ ಮಾಡಲೇಬೇಕಲ್ಲವೆ. ಹೀಗೇ ಬದುಕಬೇಕಲ್ಲ ಅವರು ಅದಕ್ಕಾಗಿಯೇ ಆರೋಪ ಮಾಡುತ್ತಿದ್ದಾರೆ. ಸರ್ಕಾರದ ಕಾರ್ಯಕ್ರಮಗಳ ಗಮನ ಡೈವರ್ಷನ್ ಮಾಡಬೇಕು ಅಂತ ಆರೋಪಗಳು ಮಾಡುತ್ತಿದ್ದಾರೆ. ಅಕ್ಕಿ ಯಾಕೆ ಅಕ್ಕಿ ಯಾಕೆ ಅಂತ ಬಾಯಿ ಬಡಿದುಕೊಂಡರು, ಅಕ್ಕಿ ಕೊಟ್ಟಾಯ್ತು. ಕರೆಂಟ್ ಯಾಕೆ ಕರೆಂಟ್ ಯಾಕೆ ಅಂದರು ಕರೆಂಟ್ ಕೊಟ್ಟಾಯ್ತು. ಎಲ್ಲ ಕಾರ್ಯಕ್ರಮ ಅನುಷ್ಠಾನ ಆಗುತ್ತಿರುವಾಗ ಏನು ಮಾಡಬೇಕು ಅವರು? ಆರೋಪ ಮಾಡಿ ಓಡಿಹೋಗುವವರನ್ನು ಬಹಳಷ್ಟು ಜನರನ್ನು ನೋಡಿದ್ದೇವೆ ಎಂದು ತಿರುಗೇಟು ನೀಡಿದರು.
ಕಾಂಗ್ರೆಸ್ ಪಕ್ಷಕ್ಕೆ ಯಾರೇ ಬಂದರೂ ಸ್ವಾಗತ. ಪಕ್ಷ ಸೇರ್ಪಡೆ ಬಗ್ಗೆ ಹೈಕಮಾಂಡ್ ಅಂತಿಮ ನಿರ್ಧಾರ ಕೈಗೊಳ್ಳುತ್ತೆ. ಲೋಕಸಭಾ ಚುನಾವಣೆ ಬಗ್ಗೆ ದೆಹಲಿಯಲ್ಲಿ ಸಭೆ ನಡೆದಿದೆ. ಯಾವ ರೀತಿ ಚುನಾವಣೆ ಎದುರಿಸಬೇಕು ಎಂದು ಚರ್ಚೆ ಆಗಿದೆ. ಅಭ್ಯರ್ಥಿ ಆಯ್ಕೆಗೆ ಮಾನದಂಡಗಳೇನು ಎಂಬ ಬಗ್ಗೆ ಚರ್ಚಿಸಲಾಗಿದೆ ಎಂದು ತಿಳಿಸಿದರು.