ನಟ ಜಗ್ಗೇಶ್, ಪತ್ನಿ ಪರಿಮಳ ಅವರಜೊತೆಗೂಡಿ ರಾಜ್ಯದ ಉಪಮುಖ್ಯ ಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಭೇಟಿಯಾಗಿದ್ದಾರೆ.
ಕಾಂಗ್ರೆಸ್ನಿಂದ ರಾಜಕೀಯ ಆರಂಭಿಸಿ ಈಗ ಬಿಜೆಪಿಯಲ್ಲಿರುವ ಅಪ್ಪಟ ಮೋದಿ ಅನುಯಾಯಿ ನಟ ಜಗ್ಗೇಶ್,ಇಂದು ಉಪಮುಖ್ಯಮಂತ್ರಿ, ಹಳೆಯ ಸ್ನೇಹಿತ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿದ್ದಾರೆ. ಪತ್ನಿ ಪರಿಮಳಾ ಅವರೊಟ್ಟಿಗೆ ಡಿ.ಕೆ.ಶಿವಕುಮಾರ್ ಅವರ ನಿವಾಸಕ್ಕೆ ತೆರಳಿ ಹೂಗುಚ್ಛ ನೀಡಿ ಶಿವಕುಮಾರ್ ಅವರಿಗೆ ಅಭಿನಂದನೆಯನ್ನು ನಟ ಜಗ್ಗೇಶ್ ತಿಳಿಸಿದ್ದಾರೆ.
ಡಿ.ಕೆ.ಶಿವಕುಮಾರ್ ಭೇಟಿ ಬಳಿಕ ಮಾಧ್ಯಮಗಳೊಟ್ಟಿಗೆ ಮಾತನಾಡಿದ ನಟ ಜಗ್ಗೇಶ್, ಇದೊಂದು ಸಾಮಾನ್ಯ ಭೇಟಿಯಾಗಿತ್ತು, ಗೆಳೆಯನಿಗೆ ಅಭಿನಂದನೆ ಹೇಳುವ ಕಾರಣದಿಂದ ಬಂದೆ. ಅವರು ಅಧಿಕಾರ ವಹಿಸಿಕೊಂಡಾಗ ನಾನು ಅಮೆರಿಕದಲ್ಲಿದ್ದೆ. ಹಾಗಾಗಿ ಈಗ ಬಂದು ಅವರಿಗೆ ಶುಭಾಶಯ ತಿಳಿಸಿದ್ದೇನೆ ಎಂದರು. ಮುಂದುವರೆದು ಮಾತನಾಡಿ, ”ರಾಜ್ಯಸಭಾ ಸದಸ್ಯನಾಗಿ ಒಂದು ವರ್ಷ ಪೂರೈಸುತ್ತಿದ್ದು, ನನ್ನ ಕಾರ್ಯವ್ಯಾಪ್ತಿಯಲ್ಲಿ ನನಗೆ ಏನೇನು ಮಾಡಲು ಸಾಧ್ಯವಿದೆಯೋ ಅದೆಲ್ಲವನ್ನೂ ಮಾಡುತ್ತಿದ್ದೇನೆ. ತುಮಕೂರು ಜಿಲ್ಲೆ ನೂಡಲ್ ಡಿಸ್ಟ್ರಿಕ್ಟ್ ಆಗಿದೆ. ಅದರ ಭಾಗವಾಗಿ ಒಂದು ಹೋಬಳಿಯನ್ನು, ಒಂದು ಗ್ರಾಮವನ್ನು ದತ್ತು ತೆಗೆದುಕೊಂಡು ಕೆಲಸ ಮಾಡುತ್ತಿದ್ದೇನೆ. ಈವರೆಗೆ 16-17 ಕೋಟಿ ರೂಪಾಯಿಗಳ ಕೆಲಸ ಆಗಿದೆ ಇನ್ನೂ ಮಾಡಲು ಸಾಕಷ್ಟಿದೆ” ಎಂದರು.
2008 ರಲ್ಲಿ ಕಾಂಗ್ರೆಸ್ ಪಕ್ಷದಿಂದಲೇ ರಾಜಕೀಯ ಆರಂಭಿಸಿದ ಜಗ್ಗೇಶ್ಗೆ ಚುನಾವಣೆ ಟಿಕೆಟ್ ಕೊಡಿಸುವುದರಲ್ಲಿ ಡಿ.ಕೆ.ಶಿವಕುಮಾರ್ ಪ್ರಧಾನ ಪಾತ್ರ ವಹಿಸಿದ್ದರು. ಆದರೆ ಕಾಂಗ್ರೆಸ್ನಿಂದ ಚುನಾವಣೆ ಸ್ಪರ್ಧಿಸಿ ಗೆದ್ದ ಬಳಿಕ ಬಿಜೆಪಿಗೆ ಪಕ್ಷಾಂತರ ಮಾಡಿದರು ಜಗ್ಗೇಶ್. ಬಿಜೆಪಿಯಿಂದ 2010 ರಿಂದ 2016ರ ವರೆಗೆ ವಿಧಾನಪರಿಷತ್ ಸದಸ್ಯರಾದರು. 2018ರಲ್ಲಿ ಯಶವಂತಪುರ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಿ ಸೋತರು. ನಂತರ ವರ್ಷದ ಹಿಂದೆ ಅವರನ್ನು ರಾಜ್ಯಸಭಾ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು.
ನರೇಂದ್ರ ಮೋದಿ ಅವರ ಅನುಯಾಯಿ ಆಗಿರುವ ಜಗ್ಗೇಶ್, ಕಾಂಗ್ರೆಸ್ ಪಕ್ಷದಲ್ಲಿಯೂ ಕೆಲವು ಗೆಳೆಯರನ್ನು ಹೊಂದಿದ್ದಾರೆ. ಡಿ.ಕೆ.ಶಿವಕುಮಾರ್ ಸಹ ಅವರಲ್ಲೊಬ್ಬರು. ಇತ್ತೀಚೆಗಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹೀನಾಯವಾಗಿ ಸೋತಾಗ, ಕೊಟ್ಟ ಕುದುರೆಯನ್ನು ಏರಲಾರದವನು ಶೂರನೂ ಅಲ್ಲ ಧೀರನೂ ಅಲ್ಲ ಎಂದು ಮಾರ್ಮಿಕವಾಗಿ ಟ್ವೀಟ್ ಮಾಡಿ ರಾಜ್ಯ ಬಿಜೆಪಿ ವಿರುದ್ಧ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ್ದರು.