ಸಮುದ್ರಕ್ಕೆ ಇಳಿದಿದ್ದ ಮೂವರು ಪ್ರವಾಸಿಗರ ಪೈಕಿ ಇಬ್ಬರನ್ನು ರಕ್ಷಣೆ ಮಾಡಿದ್ದು, ಓರ್ವ ಕೊಚ್ಚಿ ಹೋಗಿರುವಂತಹ ಘಟನೆ ಜಿಲ್ಲೆಯ ಭಟ್ಕಳ ತಾಲೂಕಿನ ಮುರ್ಡೇಶ್ವರ ಕಡಲತೀರದಲ್ಲಿ ನಡೆದಿದೆ.
ಉತ್ತರ ಕನ್ನಡ: ಸಮುದ್ರಕ್ಕೆ ಇಳಿದಿದ್ದ ಮೂವರು ಪ್ರವಾಸಿಗರ ಪೈಕಿ ಇಬ್ಬರನ್ನು ರಕ್ಷಣೆ ಮಾಡಿದ್ದು, ಓರ್ವ ಕೊಚ್ಚಿ ಹೋಗಿರುವಂತಹ ಘಟನೆ ಜಿಲ್ಲೆಯ ಭಟ್ಕಳ ತಾಲೂಕಿನ ಮುರ್ಡೇಶ್ವರ ಕಡಲತೀರದಲ್ಲಿ ನಡೆದಿದೆ. ಕೊಚ್ಚಿಹೋದ ಸಂತೋಷ್ ಹುಲಿಗೊಂಡ(19)ಗಾಗಿ ಹುಡುಕಾಟ ನಡೆದಿದ್ದು, ಹಸನ್ ಮಜ್ಜಿಗಿ ಗೌಡರ್(21), ಸಂಜೀವ್ ಹೆಬ್ಬಳ್ಳಿ(20) ಇಬ್ಬರ ರಕ್ಷಣೆ ಮಾಡಲಾಗಿದೆ. ಧಾರವಾಡ ಜಿಲ್ಲೆ ಕಲಘಟಗಿ ಮೂಲದ 22 ಜನರು ಪ್ರವಾಸಕ್ಕೆಂದು ಮುರ್ಡೇಶ್ವರಕ್ಕೆ ಬಂದಿದ್ದರು. ಚಂಡಮಾರುತದ ಪರಿಣಾಮ ಬೃಹತ್ ಅಲೆಗಳು ದಡಕ್ಕೆ ಅಪ್ಪಳಿಸುತ್ತಿವೆ. ಸಮುದ್ರಕ್ಕೆ ಇಳಿಯದಂತೆ ಸೂಚನಾ ಫಲಕ ಹಾಕಿದ್ದರೂ ನಿರ್ಲಕ್ಷ್ಯ ಮಾಡಿದ್ದಾರೆ.
ಕೊಚ್ಚಿಹೋದ ಸಂತೋಷ್ ಹುಲಿಗೊಂಡಗಾಗಿ ಲೈಫ್ಗಾರ್ಡ್ಸ್ ಶೋಧ ಮಾಡುತ್ತಿದ್ದಾರೆ. ಮುರ್ಡೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಅರಬ್ಬೀ ಸಮುದ್ರದಲ್ಲಿ ಬಿಪೋರ್‌ಜಾಯ್ ಚಂಡಮಾರುತ ಅಬ್ಬರ ಶುರು ಮಾಡಿದ್ದು, ಕಾರವಾರದ ರವೀಂದ್ರನಾಥ ಟ್ಯಾಗೋರ್ ಬೀಚ್‌ನಲ್ಲಿ ಕಡಲಕೊರೆತ ಹೆಚ್ಚಾಗಿದೆ. ಗಾಳಿಯ ರಭಸಕ್ಕೆ 3 ರಿಂದ 4 ಮೀಟರ್ ಎತ್ತರಕ್ಕೆ ಅಲೆಗಳು ಏಳುತ್ತಿವೆ. ಅಲೆಗಳ ಹೊಡೆತಕ್ಕೆ ತೀರಪ್ರದೇಶದ ಮರಳು ಕೊಚ್ಚಿ ಹೋಗುತ್ತಿದೆ. ಮೀನುಗಾರಿಕೆಗೆ ತೆರಳದಂತೆ ಮೀನುಗಾರರಿಗೆ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.
ಕರಾವಳಿಯಲ್ಲಿ ಇನ್ನೂ ಎರಡು ದಿನಗಳ ಕಾಲ ಸೈಕ್ಲೋನ್ ಎಫೆಕ್ಟ್ ಮುಂದುವರೆಯಲಿದೆ. ಕಡಲಕೊರೆತ ಹಿನ್ನಲೆ ದೋಣಿಗಳನ್ನ ಎತ್ತರದ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ. ಅಲೆಗಳ ಹೊಡೆತಕ್ಕೆ ಬೋಟ್‌ಗಳು ಸಿಲುಕದಂತೆ ಮುಂಜಾಗ್ರತೆ ವಹಿಸಲಾಗಿದೆ. ಸಮುದ್ರಕ್ಕಿಳಿಯದಂತೆ ಪ್ರವಾಸಿಗರಿಗೆ ಜಿಲ್ಲಾಡಳಿತ ಸೂಚನೆ ನೀಡಿದೆ.