‘ಕೂಸು ಹುಟ್ಟುವ ಮುನ್ನವೇ ಕುಲಾವಿ ಹೊಲಿಸಿದ್ರಂತೆೆ’ ಅನ್ನುವ ಹಾಗಾಗಿದೆ ರಾಜ್ಯ ಕಾಂಗ್ರೆಸ್ ಪರಿಸ್ಥಿತಿ.!’ಮುಂದಿನ ಸಿಎಂ ಸಿದ್ದು’ ಅನ್ನೋ ಅಭಿಮಾನಿಗಳು ಒಂದೆಡೆಯಾದರೆ, ‘ಡಿಕೆಯೇ ನೆಕ್ಸ್ಟ್ ಸಿಎಂ’ ಅಂತ ಗುಟುರು ಹಾಕ್ತಿದ್ದಾರೆ ಇನ್ನು ಕೆಲವರು.! ಇತ್ತೀಚೆಗೆ ಈ ರೇಸ್‌ನಲ್ಲಿ ಕೇಳಿಬಂದಿದ್ದು ಮಾಚಿ ಸಚಿವ ಎಂಬಿ ಪಾಟೀಲ್ ಹೆಸರು. ನಾನೇನು ಸನ್ಯಾಸಿಯಲ್ಲ ನಾನೂ ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿ’ ಎಂದು ಪಾಟೀಲ್ ಕೂಡಾ ಸಿಎಂ ಕುರ್ಚಿಗೆ ಟವೇಲ್ ಹಾಕಿದ್ದಾರೆ. ಈ ಪಟ್ಟಿ ಇನ್ನೂ ಬೆಳೆಯುತ್ತ ಹೋದರೆ ಅಚ್ಚರಿಪಡಬೇಕಿಲ್ಲ.! ತಾವೇ ಅಧಿಕಾರಕ್ಕೆ ಬರುತ್ತೇವೆ ಅನ್ನೋ ಓವರ್ ಕಾನ್ಫಿಡೆನ್ಸೋ ಅಥವಾ ತಮ್ಮ ಸ್ಥಾನ ಭದ್ರಪಡಿಸಿಕೊಳ್ಳಲು ಈ ಮಾತುಗಳೋ.! ಗೊತ್ತಿಲ್ಲ.
ಇನ್ನು ಈ ಮಧ್ಯೆ ಜಮೀರ್ ಅಹ್ಮದ್ ಸಿದ್ದು ಪರ ಪದೇ ಪದೇ ಬ್ಯಾಟ್ ಬೀಸುತ್ತಿದ್ದು ಬಂಡೆ ಸಿಡಿಯುವಂತೆ ಮಾಡಿದೆ. ಹೌದು.! ಮಾಜಿ ಸಿಎಂ ಸಿದ್ದು ಸಿದ್ಧರಾಮೋತ್ಸವ’ ಆಚರಿಸಿಕೊಳ್ಳೊ ಮೂಲಕ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದರೆ ಈ ನಡುವೆ ಮಾಧ್ಯಮಗಳ ಮುಂದೆ ಬಂದೂ ಬಂದೂ ಜಮೀರ್ ‘ಸಿದ್ದು ಮುಂದಿನ ಸಿಎಂ’ ಅಂತ ಹೇಳಿಕೆ ನೀಡ್ತಿರೋದು ಸಹಜವಾಗಿ ಡಿಕೆಯ ಕಣ್ಣು ಕೆಂಪಗಾಗಿಸಿದೆ.
ಮುಂದಿನ ಸಿಎಂ ವಿಚಾರದ ಬಗ್ಗೆ ಎಲ್ಲ ಮುಖಂಡರೂ ಸ್ಪಷ್ಟನೆ ಕೊಟ್ಟಿದ್ದಾಯ್ತು. ‘ಪಕ್ಷದೊಳಗೆ ಯಾವುದೇ ಒಡಕಿಲ್ಲ. ಸಣ್ಣಪುಟ್ಟ ಭಿನ್ನಭಿಪ್ರಾಯಗಳಿವೆ ಅಷ್ಟೇ.! ಕಾಂಗ್ರೆಸ್ ಪಕ್ಷವನ್ನ ಅಧಿಕಾರಕ್ಕೆ ತರುವುದೇ ನಮ್ಮಗುರಿ ಹೊರತು, ಮುಖ್ಯಮಂತ್ರಿ ಯಾರಾಗ್ತಾರೆ ಅನ್ನೋದನ್ನ ಹೈಕಮಾಂಡ್ ಡಿಸೈಡ್ ಮಾಡತ್ತೆ. ಇಲ್ಲಿ ವ್ಯಕ್ತಿ ಪೂಜೆಯ ಬದಲು ಪಕ್ಷ ಪೂಜೆ ಇಂಪಾರ್ಟೆಂಟು. ಕೋಮುವಾದಿ ಶಕ್ತಿಗಳನ್ನ ದೂರವಿಡುವುದು ನಮ್ಮ ಮೊದಲ ಆದ್ಯತೆ.’ ಈ ಎಲ್ಲಾ ಹೇಳಿಕೆಗಳೂ ಇವೆಯಲ್ಲಾ, ಇದು ಕಾಂಗ್ರೆಸ್ ನಾಯಕರ ಕಾಮನ್ ಡೈಲಾಗ್ ಆಗಿಬಿಟ್ಟಿದೆ. ಎಲ್ಲರೂ ಇದನ್ನೇ ಹೇಳುತ್ತಾರೆ ಆದರೆ ಒಳಗೊಳಗೇ ಪ್ಲಾನ್ ಮಾಡ್ತಾ ಇರೋದು ಮಾತ್ರ ಓಪನ್ ಸೀಕ್ರೇಟ್.!
ಇನ್ನು ಜಮೀರ್ ಹೇಳಿಕೆಗೆ ಕೆರಳಿ ಕೆಂಡವಾಗಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಪಕ್ಷವನ್ನು ಅಧಿಕಾರಕ್ಕೆ ತರುವ ಕೆಲಸವನ್ನು ಎಲ್ಲರೂ ಬಾಯಿ ಮುಚ್ಕೊಂಡು ಮಾಡಬೇಕು ಎಂದು ಅಂತಿಮ ಎಚ್ಚರಿಕೆ ನೀಡಿದರು. ಯಾರಾದ್ರು ನನ್ನ ಲೆವಲ್ ನಲ್ಲಿ ಮಾತಾಡೋರು ಇದ್ರೆ ಮಾತಾಡ್ತೇನೆ ಎಂದು ಜಮೀರ್‌ಗೆ ತಿರುಗೇಟು ಕೊಟ್ರು. ಅಲ್ಲದೇ ನಾನೂ ಸಿಎಂ ಆಕಾಂಕ್ಷಿ ಎಂಬ ಎಂಬಿ ಪಾಟೀಲ್ ಹೇಳಿಕೆಗೂ ರಿಯಾಕ್ಷನ್ ಕೊಟ್ಟ ಬಂಡೆ, 224 ಶಾಸಕರೂ ಸಿಎಂ ಆಗಲು ಆಸೆ ಪಡೋದ್ರಲ್ಲಿ ತಪ್ಪಿಲ್ಲ ಎಂದರು.
ಇನ್ನು ‘ಡಿಕೆಶಿ ಸಿಟ್ಟು ಮಾಡ್ಕೊಂಡ್ರೆ ನಾನೇನು ಮಾಡಕಾಗಲ್ಲ. ನನ್ನ ಅಭಿಪ್ರಾಯವನ್ನು ಹೇಳಿದ್ದೇನೆ ಅಷ್ಟೇ. ಅದ್ರಲ್ಲಿ ತಪ್ಪೇನಿದೆ.?’ ಎಂದು ಮರುಪ್ರಶ್ನೆ ಹಾಕೋ ಮೂಲಕ ಜಮೀರ್ ಟಾಂಗ್ ನೀಡಿದ್ರು.!
ಇನ್ನು ದಲಿತ ಸಿಎಂ ವಿಚಾರವೂ ಆಗಾಗ ಕಾಂಗ್ರೆಸ್ ನಲ್ಲಿ ಮುನ್ನೆಲೆಗೆ ಬರುತ್ತಿದೆ. ಒಟ್ಟಾರೆ ಈ ಭಿನ್ನಾಭಿಪ್ರಾಯಗಳಿಗೆ ಮುಲಾಮು ಹಚ್ಚೋಕೆ ಪಕ್ಷ ಏನು ಮಾಡತ್ತೆ.? ಎನ್ನುವುದೇ ಸದ್ಯದ ಪ್ರಶ್ನೆ. ಎಲೆಕ್ಷನ್ ಹತ್ತಿರ ಬರುತ್ತಿರೋ ವೇಳೆ ತಮ್ಮ ಲೀಡರ್ ಗಳ ಪರವಾಗಿ ಅಭಿಮಾನಿಗಳು ಬ್ಯಾಟ್ ಬೀಸ್ತಿದ್ದಾರೆ. ಇದರಿಂದ ಪಕ್ಷಕ್ಕೆ ಡ್ಯಾಮೇಜ್ ಆಗ್ತಿರೋದಂತೂ ಸುಳ್ಳಲ್ಲ. ನಾಯಕರ ನಡುವಿನ ಮುನಿಸು ಇನ್ನೂ ಹೆಚ್ಚಾಗುತ್ತಾ.? ಅಥವಾ ಹೈಕಂಮಾಡ್ ಡ್ಯಾಮೇಜ್ ಕಂಟ್ರೋಲ್ ಗೆ ಮುಂದಾಗತ್ತಾ ಅನ್ನೋದನ್ನ ಕಾದು ನೋಡ್ಬೇಕಿದೆ.