ಶಿರಸಿಯ ಜೇನು ಕೃಷಿಕನನ್ನು ಕೊಂಡಾಡಿದ ಮೋದಿ.! ‘ಮಧು’ಕೇಶ್ವರರ ಕೃಷಿಯನ್ನು ರಾಷ್ಟ್ರವೇ ಗುರುತಿಸುವಂತಾಗಿದ್ದು ಹೇಗೆ ಗೊತ್ತಾ.? ‘ಮನದ ಮಾತಿನಲ್ಲಿ ಮಧುಕೇಶ್ವರ’

ಶಿರಸಿ: ಜೇನು ಕುಟುಂಬ ಸಾಕಾಣಿಕೆ, ಗುಣಮಟ್ಟದ ಜೇನು ತುಪ್ಪ ಉತ್ಪಾದನೆ ಮೂಲಕ ಗುರುತಿಸಿಕೊಂಡಿರುವ ತಾಲೂಕಿನ ತಾರಗೋಡು ಮಧುಕೇಶ್ವರ ಹೆಗಡೆ ಅವರನ್ನು ಈಗ ರಾಷ್ಟ್ರವೇ ಗುರುತಿಸಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮನ್ ಕಿ ಬಾತ್‌ನಲ್ಲಿ ಮಧುಕೇಶ್ವರ ಹೆಗಡೆ ಅವರ ಕೃಷಿ ಉಲ್ಲೇಖಿಸಿರುವುದು ಜಿಲ್ಲೆಗೇ ಹೆಮ್ಮೆ ತಂದಿದೆ.

ಮಧುಕೇಶ್ವರ ಹೆಗಡೆ ಕಳೆದ ೩೫ ವರ್ಷಗಳಿಂದ ಜೇನು ಕೃಷಿಯಲ್ಲಿ ಪಳಗಿದವರು. ತಾರಗೋಡಿನ ಅವರ ಮನೆ ಸುತ್ತ, ಅಡಿಕೆ ತೋಟಗಳಲ್ಲಿ, ನೆಗ್ಗು ಪಂಚಾಯಿತಿಯ ಮತ್ತಿಗಾರಿನ ಅವರ ತೋಟ ಸೇರಿದಂತೆ ೧೫೦೦ ಕ್ಕೂ ಅಧಿಕ ಜೇನು ಕುಟುಂಬಗಳನ್ನು ಅವರು ಸಾಕಿದ್ದಾರೆ. ಮಿತ್ರರು, ಪರಿಚಯಸ್ಥರ ಕೃಷಿ ಭೂಮಿಯಲ್ಲಿಯೂ ಅವರು ಜೇನು ಪೆಟ್ಟಿಗೆಗಳನ್ನಿಟ್ಟು ಅವರ ಕೃಷಿ ಆದಾಯ ಜಾಸ್ತಿಗೊಳಿಸಲೂ ಕಾರಣರಾಗಿದ್ದಾರೆ. ಈ ಉತ್ತಮ ಕೃಷಿಕ ಈಗ ಪ್ರಧಾನಿ ನರೇಂದ್ರ ಮೋದಿಯವರ ಗಮನ ಸೆಳೆದಿದ್ದಲ್ಲದೇ, ಅವರು ಮನ್ ಕಿ ಬಾತ್ ನಲ್ಲಿ ಉಲ್ಲೇಖಿಸಿ, ರಾಷ್ಟ್ರವೇ ಅವರತ್ತ ನೋಡುವಂತಾಗಿದೆ.

ಕೇವಲ 8 ನೇ ತರಗತಿಗೆ ಶಾಲೆ ಬಿಡಬೇಕಾದ ಅನಿವಾರ್ಯತೆ ಮಧುಕೇಶ್ವರ ಹೆಗಡೆ ಅವರಿಗೆ ಬಂದೊದಗಿತ್ತು. ಉದ್ಯಮಕ್ಕಿಳಿಯಲು ಬಂಡವಾಳ ಇಲ್ಲದ ಆ ದಿನಗಳಲ್ಲಿ ಅವರು ಕೃಷಿಯನ್ನೇ ಉದ್ಯಮವಾಗಿಸಿಕೊಳ್ಳುವ ಯತ್ನ ನಡೆಸಿದರು. ಅಂತಹ ಸ್ಥಿತಿಯಲ್ಲಿ ಅವರ ಕೈ ಹಿಡಿದಿದ್ದು ಜೇನು ಕೃಷಿ.!

ಜೇನು ಕುಟುಂಬವೊಂದರ ಸದಸ್ಯನಂತೆ ಜೇನು ಕೃಷಿಯ ತಂತ್ರಜ್ಞಾನಗಳನ್ನೆಲ್ಲ ಮಧುಕೇಶ್ವರ ಹೆಗಡೆ ತಮ್ಮದಾಗಿಸಿಕೊಂಡಿದ್ದಾರೆ. ಇಂದು ವಾರ್ಷಿಕವಾಗಿ 4.5 ಟನ್ ಜೇನು ತುಪ್ಪ ಉತ್ಪಾದಿಸಿ ಮಾರಾಟ ಮಾಡುತ್ತಿದ್ದಾರೆ. ಇನ್ನೊಂದು ವಿಶೇಷವೆಂದರೆ, ಆಯಾ ವನಸ್ಪತಿ ಗಿಡಗಳ ಬಳಿಯೇ ಜೇನು ತುಪ್ಪ ಇಟ್ಟು, ತುಳಸಿ, ಸೀಗೇಕಾಯಿ, ಆಮ್ಲ ಜೇನು ತುಪ್ಪಗಳನ್ನು ವಿಶೇಷವಾಗಿ ಉತ್ಪಾದಿಸುತ್ತಿದ್ದಾರೆ. ಔಷಧ ಉದ್ದೇಶಕ್ಕಾಗಿ ಅವರು ತಯಾರಿಸುವ ಈ ಜೇನು ತುಪ್ಪಕ್ಕೆ ವಿಶೇಷ ಬೇಡಿಕೆ ಸಹ ಇದೆ.

ಸದ್ಯ ಮಂತ್ರಾಲಯದ ಪ್ರವಾಸದಲ್ಲಿರುವ ಮಧುಕೇಶ್ವರ ಹೆಗಡೆ ಮಾತನಾಡಿ, ‘ದೇಶದ ಪ್ರಧಾನಿಯವರೇ ನನ್ನ ಹೆಸರು ಪ್ರಸ್ತಾಪಿಸಿರುವುದು ನನ್ನ ಜೀವನದ ಅಮೂಲ್ಯ ಕ್ಷಣವಾಗಿದೆ. ಪ್ರಧಾನಿಯವರು ಕೃಷಿಗೆ ಒತ್ತು ನೀಡಿರುವುದು ಮತ್ತು ಕೃಷಿಕರನ್ನು ಉತ್ತೇಜಿಸುವ ರೀತಿ ಅದಮ್ಯವಾದುದು’ ಎಂದಿದ್ದಾರೆ.

ಹೆಮ್ಮೆಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಇಂದಿನ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ನಮ್ಮ ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲೂಕಿನ ಜೇನು ಕೃಷಿಕರಾದ ಮಧುಕೇಶ್ವರ ಹೆಗಡೆ ಅವರ ಸಾಧನೆಯನ್ನು ಪ್ರಶಂಸಿಸಿದ್ದಾರೆ. ಜೇನು ಕೃಷಿಯಲ್ಲೂ ಅದ್ಭುತ ಲಾಭ ಮಾಡಬಹುದು ಎಂಬುದನ್ನು ಸಾಧಿಸಿ ತೋರಿಸಿದ ನಮ್ಮ ಜಿಲ್ಲೆಯ ರೈತನ ಸಾಧನೆಯನ್ನು ಜಗತ್ತಿಗೆ ಪರಿಚಯಿಸಿದ ಮಾನ್ಯ ಪ್ರಧಾನಿಯವರಿಗೆ ಧನ್ಯವಾದಗಳು.

ಶಿವರಾಮ ಹೆಬ್ಬಾರ್
ಕಾರ್ಮಿಕ ಖಾತೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಹಾವೇರಿ