ಉಡುಪಿ: ಪ್ರತಿಯೊಬ್ಬರಿಗೂ ಜೀವನದಲ್ಲಿ ಚಂದದ ಸ್ವಂತ ಮನೆ ಕಟ್ಟಿಸಬೇಕೆನ್ನುವ ಆಸೆ ಇದ್ದೇ ಇರುತ್ತದೆ. ಆದರೆ ತಮ್ಮಿಷ್ಟದ ಕನಸಿನ ಮನೆ ಕಟ್ಟುವುದು ಅಷ್ಟು ಸುಲಭವಲ್ಲ. ಅದಕ್ಕಾಗಿ ಅದೆಷ್ಟೋ ವರ್ಷ ಶ್ರಮಪಟ್ಟು ಇನ್ನುಳಿದ ಕನಸುಗಳನ್ನು ಮರೆಯಬೇಕಾಗುತ್ತದೆ. ಇತ್ತೀಚೆಗೆ ಮನೆ ಕಟ್ಟಿಸುವವರು ಮನೆಯ ಇಂಟೀರಿಯರ್ ಡಿಸೈನ್‌ಗೆ ಹೆಚ್ಚು ಪ್ರಮುಖ್ಯತೆಯನ್ನು ಕೊಡುತ್ತಿದ್ದು, ಹೆಚ್ಚೆಚ್ಚು ಇಂಟೀರಿಯರ್ ಡಿಸೈನರ್ಸ್ಗಗಳಳ ಮೊರೆ ಹೋಗುತ್ತಿದ್ದಾರೆ.
ಮನೆಯ ಅಂದ ಹೆಚ್ಚಿಸುವ ಸಲುವಾಗಿ ವಿವಿಧ ಅಲಂಕಾರಿಕ ವಸ್ತುಗಳನ್ನು ಬಳಸುವುದು ಸಾಮಾನ್ಯ ಬಿಡಿ. ಹಾಗೆಂದ ಮಾತ್ರಕ್ಕೆ ಎಲ್ಲರ ಹತ್ತಿರವೂ ದುಬಾರಿ ವಸ್ತುಗಳನ್ನು ಖರೀದಿಸಲು ಆಗುವುದಿಲ್ಲ. ಆದರೆ ಇಲ್ಲೊಬ್ಬ ಶಿಲ್ಪಿ ಕಡಿಮೆ ಜಾಗದಲ್ಲಿ, ಕಡಿಮೆ ವೆಚ್ಚದಲ್ಲಿ ಮನೆಯನ್ನ ಆಕರ್ಷಣೀಯವಾಗಿಸುತ್ತಾರೆ.
ಹೌದು.! ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನಡ ಗ್ರಾಮದ ವಸಂತ್ ಮನೆಯ ಗೋಡೆಗಳ ಮೇಲೆ ಸಿಮೆಂಟ್‌ನಿಂದ ಬಗೆ ಬಗೆಯ ವಿನ್ಯಾಸಗಳನ್ನು ಮಾಡಿ ಸೈ ಎನಿಸಿಕೊಂಡಿದ್ದಾರೆ. ಇವರು ವಿವಿದ ಡಿಸೈನ್‌ಗಳನ್ನು ಗೋಡೆಯಲ್ಲಿ ಕೆತ್ತನೆ ಮಾಡುವ ಮೂಲಕ ಮನೆಗೆ ರಿಚ್ ಲುಕ್ ಕೊಡುತ್ತಾರೆ.
ಗೋಡೆಯ ಮೇಲೆ ಹೂವು ಹಾಗೂ ವಿವಿಧ ವಿನ್ಯಾಸದ ಬಳ್ಳಿಗಳನ್ನು ಕೆತ್ತುವ ಇವರು ಕಡಿಮೆ ಖರ್ಚಿನಲ್ಲಿ ಕಿಟಕಿ, ಬಾಗಿಲು, ಸಿಟೌಟ್, ಗೋಡೆ ಅದಲ್ಲದೆ ತುಳಸಿ ಕಟ್ಟೆಯ ಮೇಲೂ ಸಿಮೆಂಟ್‌ನಿಂದ ಡಿಸೈನ್ ಮಾಡುತ್ತಾರೆ. ಮಾಡಿದ ವಿನ್ಯಾಸ ಒಣಗಿದ ನಂತರ ಬಣ್ಣಗಳ ಕೋಟ್ ನೀಡಿ ಮನೆಯ ಮೆರುಗನ್ನು ಇನ್ನಷ್ಟು ಹೆಚ್ಚಿಸುತ್ತಾರೆ.
ಇವರು ಮೊದಲಿನಿಂದಲೂ ಚಿತ್ರಕಲೆಯಲ್ಲಿ ಆಸಕ್ತಿ ಹೊಂದಿದ್ದರು. ಇದೀಗ ಸಿಮೆಂಟ್‌ನಲ್ಲಿ ಚಿತ್ರ ಮೂಡಿಸುವುದನ್ನೇ ತಮ್ಮ ವೃತ್ತಿಯಾಗಿಸಿಕೊಂಡಿದ್ದಾರೆ. ಮನೆಯ ಎದುರಿನ ಕಂಬ ಹಾಗೂ ಕಮಾನುಗಳಿಗೆ ಬಹಳ ವಿಶೇಷವಾಗಿದ್ದು, ಎಲ್ಲರಿಂದ ಮೆಚ್ಚುಗೆ ಗಳಿಸಿದ್ದಾರೆ. ಕಳೆದ 20 ವರ್ಷಗಳಿಂದ ಗೋಡೆಗಳಿಗೆ ಡಿಸೈನ್ ಮಾಡುವ ಕೆಲಸ ಮಾಡುತ್ತಿರುವ ಇವರು ಇತ್ತೀಚಿನ ದಿನಗಳಲ್ಲಿ ತಮ್ಮ ಡಿಸೈನ್‌ಗಳಿಗೆ ಬೇಡಿಕೆ ಹೆಚ್ಚಿದೆ ಎನ್ನುತ್ತಾರೆ.
ಈ ಕ್ಷೇತ್ರದಲ್ಲಿ ಮೊದಲಿನಿಂದಲೂ ಬಹಳಷ್ಟು ಆಸಕ್ತಿ ಇತ್ತು. ನಮ್ಮ ಭಾಗದಲ್ಲಿ ಯಾವುದೇ ತರಬೇತಿ ಕೇಂದ್ರಗಳು ಇಲ್ಲದಿರುವುದರಿಂದ ಕಲಿಯುವುದು ಸ್ವಲ್ಪ ಕಷ್ಟವೆನಿಸಿತ್ತು. ಈಗ ಹಲವಾರು ಕಡೆ ಕೆಲಸ ಮಾಡಿದ ಅನುಭವವಿದೆ ಮುಂದೆ ಈ ವೃತ್ತಿಯನ್ನ ಆಸಕ್ತರಿಗೆ ಕಲಿಸುವ ಯೋಜನೆ ಇದೆ.
– ವಸಂತ್ ಶಿಲ್ಪಿ
ಪ್ರಾರಂಭದಲ್ಲಿ ತಮ್ಮ ತಾಲೂಕಿನಲ್ಲಷ್ಟೇ ಡಿಸೈನ್ ಕೆಲಸ ಮಾಡುತ್ತಿದ್ದರು. ಈಗ ಕರ್ನಾಟಕ ಸೇರಿದಂತೆ ಹತ್ತು ಹಲವು ರಾಜ್ಯಗಳಲ್ಲಿ ತಮ್ಮ ಕೈಚಳಕ ತೋರಿಸಿದ್ದಾರೆ. ಅದಲ್ಲದೆ ಸಿಂಗಾಪುರದಲ್ಲಿ 2 ವರ್ಷಗಳ ಕಾಲ ಡಿಸೈನ್ ಕೆಲಸವನ್ನು ಮಾಡಿದ್ದಾರೆ. ತಮ್ಮ ಕ್ರಿಯಾಶೀಲ ವೃತ್ತಿಯಿಂದ ಜೀವನ ರೂಪಿಸಿಕೊಂಡಿರುವ ವಸಂತ್ ಎಲ್ಲರಿಗೂ ಮಾದರಿಯಾಗಿದ್ದಾರೆ.