ಹೊನ್ನಾವರ: ಉತ್ತರ ಕನ್ನಡ ಜಿಲ್ಲೆಯ ಸ್ವಾತಂತ್ರ‍್ಯ ಹೋರಾಟದ ರೋಚಕ ಕಥೆಯಾಧರಿಸಿದ ದಂಡಿ ಚಲನಚಿತ್ರವನ್ನು ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಪ್ರದರ್ಶಿಸಲು ಸರ್ಕಾರ ಅನುಮತಿ ನೀಡಿದೆ.
ಜಿಲ್ಲೆಯಲ್ಲಿಯೇ ಚಿತ್ರಿಕರಿಸಲಾದ, ಜಿಲ್ಲೆಯ ಹಲವು ಕಲಾವಿದರಿರುವ ಈ ಚಿತ್ರವನ್ನು ಸ್ವಾತಂತ್ರ‍್ಯದ ಅಮೃತಮಹೋತ್ಸವ ಹಿನ್ನಲೆ ಶಾಲೆಗಳಲ್ಲಿ ಪ್ರದರ್ಶಿಸಲು ಅನುಮತಿ ನೀಡಬೇಕೆಂದು ಚಿತ್ರ ನಿರ್ಮಾಣ ಸಂಸ್ಥೆ ಕಲ್ಯಾಣಿ ಪ್ರೊಡಕ್ಷನ್ ಸರ್ಕಾರವನ್ನು ವಿನಂತಿಸಿತ್ತು.
ಸರ್ಕಾರವು ಸಿನೆಮಾವನ್ನು ಪರಿಶೀಲಿಸಿ ಶಿಫಾರಸ್ಸು ಮಾಡಲು 7 ಜನ ತಜ್ಞರ ಸಮಿತಿಯನ್ನು ನೇಮಿಸಿತ್ತು. ಈ ಸಮಿತಿ 30 ಅಂಶಗಳನ್ನು ಮುಖ್ಯವಾಗಿಟ್ಟುಕೊಂಡು ಚಿತ್ರವನ್ನು ವೀಕ್ಷಿಸಿತ್ತು. ಸ್ವಾತಂತ್ರ‍್ಯ ಪೂರ್ವದ ಮಹಾತ್ಮ ಗಾಂಧೀಜಿಯವರ ಉಪ್ಪಿನ ಸತ್ಯಾಗ್ರಹದ ಕಥೆಯುಳ್ಳ ಈ ಚಿತ್ರ ಅಹಿಂಸೆ, ದೇಶಪ್ರೇಮಕ್ಕೆ ಮಹತ್ವ ನೀಡಿದೆ. ಜಾತ್ಯಾತೀತ ಮೌಲ್ಯಗಳಿವೆ, ಸಹಬಾಳ್ವೆಗೆ ಮಹತ್ವ ನೀಡಿದೆ. ಸೃಜನಶೀಲತೆಯಿದ್ದು, ಪ್ರಾದೇಶಿಕ ದೃಶ್ಯಗಳು ಚಿತ್ರಣದ ಜೊತೆಗೆ ನೈಜತೆಯಿಂದ ಕೂಡಿದೆ. ಸ್ವಾತಂತ್ರ‍್ಯ ಹೋರಾಟದ ಸಂಸ್ಕೃತಿಯ ಅಂಶವನ್ನು ಹೊಂದಿದೆ.
ಜೊತೆಗೆ ಮಹಿಳೆಯರ ಪಾತ್ರ ಉತ್ತಮವಾಗಿ ಮೂಡಿ ಬಂದಿದೆ. ವೀಕ್ಷಕರಲ್ಲಿ ಸ್ವಾತಂತ್ರ‍್ಯ ಹೋರಾಟದ ಅರಿವು ಮೂಡಿಸುತ್ತದೆ. ಚಳವಳಿಯ ಸಂಪೂರ್ಣ ಮಾಹಿತಿ ಚಿತ್ರದಲ್ಲಿದೆ. ಎಲ್ಲ ವಯೋಮಾನದವರು ನೋಡಬಹುದಾದ ಸಹಬಾಳ್ವೆ, ಸಾಮಾಜಿಕ ಹೊಂದಾಣಿಕೆ, ಅಹಿಂಸೆಯನ್ನು ಉತ್ತೇಜಿಸುವಂತಿದೆ.
ಉತ್ತಮ ಛಾಯಾಗ್ರಹಣದೊಂದಿಗೆ ಪ್ರಾದೇಶಿಕ ಕಲೆಗಳ ಪರಿಚಯವನ್ನು ಒಳಗೊಂಡಿದೆ. ಸಾಮಾಜಿಕ ಕಳಕಳಿ ಸಾರುವ ಸಂದೇಶ ಈ ಚಲನಚಿತ್ರದಲ್ಲಿದೆ. ಒಟ್ಟಾರೆಯಾಗಿ ಚಲನಚಿತ್ರ ಮಕ್ಕಳ ವೀಕ್ಷಣೆಗೆ ಯೋಗ್ಯವಾಗಿದೆ ಎಂದು ತಜ್ಞರ ಸಮಿತಿ ಶಿಫಾರಸ್ಸು ಮಾಡಿದೆ.