ಯಲ್ಲಾಪುರ: ಪಟ್ಟಣ ಪಂಚಾಯಿತಿ ಸಭಾಭವನದಲ್ಲಿ ಸಾಮಾನ್ಯ ಸಭೆ ಅಧ್ಯಕ್ಷೆ ಸುನಂದಾ ದಾಸ್ ಅಧ್ಯಕ್ಷತೆಯಲ್ಲಿ ನಡೆಯಿತು. ಯಾವುದೇ ವಿಷಯಗಳ ಕುರಿತು ಗಂಭೀರ ಚರ್ಚೆಗಳು ನಡೆಯಲಿಲ್ಲ.
ನೂತನ ವಾರ್ಡಿನಲ್ಲಿ ಎಲ್ ಇ ಡಿ ದೀಪ ಅಳವಡಿಸುವ ಸಂಬಂಧ ಕೈಗೊಂಡ ಕಾಮಗಾರಿಯ ಬಿಲ್ ಮಾಡುವಾಗ ಸದಸ್ಯರ ಸಹಿ ಪಡೆದಿಲ್ಲ. ವಾರ್ಡ್ ಸದಸ್ಯರ ಗಮನಕ್ಕೆ ತಾರದೇ ಬಿಲ್ ಮಾಡಿರುವ ಬಗೆಗೆ ಸದಸ್ಯ ಅಬ್ದುಲ್ ಅಲಿ ಆಕ್ಷೇಪ ವ್ಯಕ್ತಪಡಿಸಿದರು. ಜೊತೆಗೆ ಐಬಿ ರಸ್ತೆ ಪಕ್ಕ ಸಾರ್ವಜನಿಕ ಶೌಚಾಲಯ ನಿರ್ಮಾಣಕ್ಕೆ ಮುಂದಾಗಿರುವ ಕುರಿತೂ ಆಕ್ಷೇಪ ವ್ಯಕ್ತವಾಯಿತು. ಈಗಾಗಲೇ ಪಟ್ಟಣದಲ್ಲಿರುವ ಸಾರ್ವಜನಿಕ ಶೌಚಾಲಯಗಳಲ್ಲಿ ಸ್ವಚ್ಛತೆ ನಿರ್ವಹಣೆ ಸರಿಯಾಗಿ ಆಗುತ್ತಿಲ್ಲ. ಇರುವ ಶೌಚಾಲಯಗಳನ್ನು ಸರಿಯಾಗಿ ನಿರ್ವಹಿಸಲು ಕ್ರಮ ಕೈಗೊಳ್ಳುವುದನ್ನು ಬಿಟ್ಟು ಹೊಸ ಶೌಚಾಲಯಗಳು ಏಕೆ ಎಂದು ಪ್ರಶ್ನಿಸಿದರು.
ಘನತ್ಯಾಜ್ಯ ವಿಲೇವಾರಿ ಘಟಕ ನಿರ್ವಹಣೆಗೆ ಮಾನವ ಶಕ್ತಿ ಪೂರೈಸುವ ಕುರಿತು ಹಾಗೂ ಕಚೇರಿಯ ಡಾಟಾ ಎಂಟ್ರಿ ಆಪರೇಟರ್ ನೇಮಿಸುವ ಕುರಿತು ಟೆಂಡರ್ ಕರೆಯಲು ನಿರ್ಧರಿಸಲಾಯಿತು. ೧೫ ನೇ ಹಣಕಾಸು ಯೋಜನೆಯಡಿ ತಯಾರಿಸಿದ ಕ್ರಿಯಾ ಯೋಜನೆಯಲ್ಲಿ ಅನುಮೋದನೆಯಾಗದೇ ಇರುವ ೮೦ ಲಕ್ಷ ರೂ ವೆಚ್ಚದಲ್ಲಿ ಶಾಶ್ವತ ಕುಡಿಯುವ ನೀರಿನ ಯೋಜನೆಗೆ ಪೂರಕ ಕಾಮಗಾರಿ ಕೈಗೊಳ್ಳಲು ನಿರ್ಧರಿಸಲಾಯಿತು.
ಪ.ಪಂ.ಉಪಾಧ್ಯಕ್ಷೆ ಶ್ಯಾಮಿಲಿ ಪಾಟಣಕರ್, ಸ್ಥಾಯಿ ಸಮಿತಿ ಅಧ್ಯಕ್ಷ ಆದಿತ್ಯ ಗುಡಿಗಾರ, ಮುಖ್ಯಾಧಿಕಾರಿ ಸಂಗನಬಸಯ್ಯ, ಸದಸ್ಯರು ಹಾಗೂ ಅಧಿಕಾರಿಗಳು ಹಾಜರಿದ್ದರು.