ಅಂಕೋಲಾ : ಹಿಂದಿನಂತೆ ಪರಿಶಿಷ್ಟ ಜಾತಿಯ ಪ್ರಮಾಣ ಪತ್ರ ನೀಡುವಂತೆ ಆಗ್ರಹಿಸಿ ತಾಲ್ಲೂಕಿನ ಅಲಗೇರಿ ಗ್ರಾಮದ ಬಾಳೆಗುಳಿಯ ಕೆಲ ಗ್ರಾಮಸ್ಥರು ಶುಕ್ರವಾರ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.
ಹಿಂದುಳಿದ ವರ್ಗದವರಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಪಡೆದುಕೊಳ್ಳುವುದು ಸಾರ್ವಜನಿಕರ ಹಕ್ಕು. ಹಿಂದಿನಿಂದಲೂ ರೇಷನ್ ಕಾರ್ಡ್ ಆಧಾರ ಕಾರ್ಡ್ ಮತ್ತು ಇತರ ಎಲ್ಲಾ ದಾಖಲಾತಿಗಳನ್ನು ಹೊಂದಿದ್ದು ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪಡೆದು ಶಿಕ್ಷಣ ಉದ್ಯೋಗ ಇತರೆ ಸರ್ಕಾರಿ ಸೌಲಭ್ಯಗಳನ್ನು ಪಡೆದುಕೊಂಡು ಬಂದಿರುತ್ತೇವೆ. ಇತ್ತೀಚಿನ ಮೂರು ವರ್ಷಗಳಿಂದ ಅಂಕೋಲಾ ತಹಶೀಲ್ದಾರರ ಕಾರ್ಯಾಲಯದಿಂದ ಜಾತಿ ಪ್ರಮಾಣ ಪತ್ರವನ್ನು ನೀಡುವುದನ್ನು ಸ್ಥಗಿತಗೊಳಿಸಲಾಗಿದೆ. ವಿಚಾರಿಸಿದರೆ ಯಾವುದೋ ವ್ಯಕ್ತಿಯ ದೂರು ವಿಚಾರಣೆಯಲ್ಲಿದೆ ಎನ್ನುವ ಹಾರಿಕೆಯ ಉತ್ತರ ನೀಡಲಾಗುತ್ತಿದೆ. ಈ ಕುರಿತು ಸರಿಯಾದ ಕ್ರಮ ಕೈಗೊಳ್ಳದ ಕಾರಣ ಮಕ್ಕಳ ವಿದ್ಯಾಭ್ಯಾಸ ಉದ್ಯೋಗ ಸೇರಿದಂತೆ ಇತರೆ ಸರ್ಕಾರಿ ಸೌಲಭ್ಯಗಳು ಸಮಾಜದ ಬಡ ಹಿಂದುಳಿದ ವರ್ಗಕ್ಕೆ ದೊರೆಯದೆ ಅನ್ಯಾಯವಾಗುತ್ತಿದೆ. ಆರ್ಥಿಕವಾಗಿ ದುರ್ಬಲರಾಗಿರುವ ನಾವು ಸಂಕಷ್ಟದಿಂದ ಜೀವನ ನಡೆಸುತ್ತಿದ್ದೇವೆ. ಹಾಗಾಗಿ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ನ್ಯಾಯ ಒದಗಿಸಿ ಕೊಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಪ್ರಮುಖರಾದ ವಿನೋದ ಗಾಂವಕರ, ರಾಘವೇಂದ್ರ ಬೋವಿ, ರಾಜನ್ ಸ್ವಾಮಿ, ಸುಭಾಷ್ ಸ್ವಾಮಿ, ರಾಮ ಸ್ವಾಮಿ, ಧನಲಕ್ಷ್ಮಿ ಸ್ವಾಮಿ, ಕವಿತಾ ಸ್ವಾಮಿ ಸೇರಿದಂತೆ ಭೋವಿ ಜನಾಂಗಕ್ಕೆ ಸೇರಿದ ಹಲವರು ಇದ್ದರು.