ದಾಂಡೇಲಿ : ಅದೊಂದು ದುರ್ಗಮ ಕಾಡಿನ ನಡುವೆ ಇರುವ ಪ್ರಕೃತಿ ಸೊಬಗಿನ ಪುಟ್ಟ ಗ್ರಾಮವೆ ದಾಂಡೇಲಿ ತಾಲ್ಲೂಕಿನ ಕಲಬಾವಿ ಗ್ರಾಮ. ಇಲ್ಲಿ ವನ್ಯಪ್ರಾಣಿಗಳು ಹೇರಳವಾಗಿದ್ದು, ಹುಲಿ, ಕರಡಿ, ಆನೆಗಳ ಭಯದ ನಡುವೆಯು ಬದುಕು ಕಟ್ಟಿಕೊಂಡಿರುವ ಗ್ರಾಮಸ್ಥರು. ಒಂದರಿಂದ 5 ನೇ ತರಗತಿಯವರೆಗೆ ಇಲ್ಲಿ ಸರಕಾರಿ ಶಾಲೆಯೊಂದು ಇದ್ದು, ಮುಂದಿನ ಶಿಕ್ಷಣಕ್ಕೆ ಸರಿ ಸಮಾರು 6 ಕಿ.ಮೀ ದೂರದಲ್ಲಿರುವ ಕುಳಗಿಯವರೆಗೆ ನಡೆದು, ಆನಂತರ ಕುಳಗಿಯಿಂದ ಸಾರಿಗೆ ಬಸ್ ಇಲ್ಲವೇ ಖಾಸಗಿ ಪ್ರಯಾಣಿಕ ವಾಹನಗಳ ಮೂಲಕ ದಾಂಡೇಲಿ ಅಥವಾ ಅಂಬಿಕಾನಗರಕ್ಕೆ ಹೋಗಬೇಕು.
ಕಲಬಾವಿ ಗ್ರಾಮದಿಂದ ಕುಳಗಿ ವೃತ್ತದವರೆಗೆ ನಡೆದುಕೊಂಡು ಹೋಗುವುದೇ ಇಲ್ಲಿರುವ ಮಹತ್ವದ ಸಮಸ್ಯೆ. ಕಾರಣವಿಷ್ಟೆ ದಟ್ಟ ಕಾಡಿನ ಮಧ್ಯೆಯಿರುವ ಈ ಗ್ರಾಮ ಮತ್ತು ಗ್ರಾಮವನ್ನು ಸಂಪರ್ಕಿಸುವ ರಸ್ತೆಯಲ್ಲಿ ಹೆಚ್ಚಿನ ದಿನಗಳಲ್ಲಿ ವನ್ಯ ಪ್ರಾಣಿಗಳಾದ ಹುಲಿ, ಕರಡಿ, ಆನೆಗಳು ಸಾಮಾನ್ಯವಾಗಿ ಕಂಡು ಬರುತ್ತಿದೆ. ಹಾಗಾಗಿ ವನ್ಯಪ್ರಾಣಿಗಳ ಭಯದಿಂದಾಗಿ ಅನೇಕ ಮಕ್ಕಳು ಶಿಕ್ಷಣವನ್ನು ಅರ್ಧದಲ್ಲೆ ನಿಲ್ಲಿಸಿದ ಉದಾಹರಣೆಗಳು ಅನೇಕ ಇವೆ. ಮೊದಲೆ ಇದು ಬಡವರಿರುವ ಊರು. ಬದುಕಿಗಾಗಿ ಕೂಲಿ ನಾಲಿಯೆ ಇಲ್ಲಿಯ ಜನತೆಗೆ ಆಧಾರವಾಗಿರುವಾಗ ಸ್ವಂತ ದ್ವಿಚಕ್ರ ವಾಹನ ಖರೀದಿಸುವುದು ಸಹ ಅಷ್ಟು ಸುಲಭದ ಕೆಲಸವಲ್ಲ. ಮಕ್ಕಳ ಶಿಕ್ಷಣಕ್ಕಾಗಿ ಇಲ್ಲಿಗೆ ಸಾರಿಗೆ ಬಸ್ ಸಂಪರ್ಕವನ್ನು ಕಲ್ಪಿಸುವಂತೆ ಕಳೆದ ಅನೇಕ ವರ್ಷಗಳಿಂದ ಇಲ್ಲಿಯ ಜನ ಹೋರಾಟದ ಜೊತೆಯಲ್ಲಿ ಮನವಿ ನೀಡುತ್ತಲೆ ಬಂದಿದ್ದರು. ಇತ್ತ ಶಾಸಕರಾದ ಆರ್.ವಿ.ದೇಶಪಾಂಡೆಯವರಿಗೂ ಮನವಿ ನೀಡಿ ಸಾರಿಗೆ ಬಸ್ ಸೌಲಭ್ಯವನ್ನು ಒದಗಿಸುವಂತೆ ವಿನಂತಿಸಿದ್ದರು.
ಅಂತೂ ಕೊನೆಯದಾಗಿ ಎಲ್ಲರ ಹೋರಾಟದ ಫಲವಾಗಿ ಇದೀಗ ದಾಂಡೇಲಿ ಸಾರಿಗೆ ಘಟಕದವರು ದೊಡ್ಡ ಮನಸ್ಸು ಮಾಡಿ ದಾಂಡೇಲಿಯಿಂದ ಕಲಬಾವಿಗೆ ಸಾರಿಗೆ ಬಸ್ಸಿನ ಸಂಪರ್ಕವನ್ನು ಒದಗಿಸಿದ್ದಾರೆ. ಪ್ರತಿದಿನ ಬೆಳಿಗ್ಗೆ 8 ಗಂಟೆಗೆ ದಾಂಡೇಲಿ ಬಸ್ ನಿಲ್ದಾಣದಿಂದ ಹೊರಡುವ ಬಸ್ ಕಲಬಾವಿಗೆ ಬೆಳಿಗ್ಗೆ 8.30 ಗಂಟೆಗೆ ತಲುಪುತ್ತದೆ. ಅದೇ ರೀತಿ ಸಂಜೆ 5 ಗಂಟೆಗೆ ಹೊರಡುವ ಬಸ್ ಕಲಬಾವಿಗೆ 5.30 ಗಂಟೆಗೆ ತಲುಪಲಿದೆ.
ಹಲವು ವರ್ಷಗಳ ಬಹುಮುಖ್ಯವಾದ ಬೇಡಿಕೆ ಈಡೇರಿದ ಹಿನ್ನಲೆಯಲ್ಲಿ ಕಲಬಾವಿಗೆ ಮೊಟ್ಟ ಮೊದಲ ಬಾರಿಗೆ ಆರಂಭವಾದ ಸಾರಿಗೆ ಬಸ್ಸಿಗೆ ಇಂದು ಶುಕ್ರವಾರ ಕಲಬಾವಿ ಗ್ರಾಮಸ್ಥರು ಹೂ ಮಾಲೆ ಹಾಕಿ, ಆರತಿ ಬೆಳಗಿ ಪೂಜೆ ಸಲ್ಲಿದರು. ಆ ಬಳಿಕ ನೆರೆದಿದ್ದವರೆಲ್ಲರಿಗೂ ಸಿಹಿಯನ್ನು ಹಂಚಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಸ್ಥಳೀಯ ಗ್ರಾಮ ಪಂಚಾಯ್ತು ಸದಸ್ಯರುಗಳಾದ ರಮೇಶ್ ನಾಯ್ಕ, ಅಶೋಕ್ ನಾಯ್ಕ, ಗೋಕುಲ್ ಮಿರಾಶಿ, ಸಾರಿಗೆ ಘಟಕದ ವ್ಯವಸ್ಥಾಪಕರಾದ ಎಲ್.ಎಚ್.ರಾಥೋಡ್, ಸ್ಥಳೀಯ ಶಾಲಾ ಮುಖ್ಯೋಪಾಧ್ಯಯರಾದ ಪ್ರವೀಣ್.ಎಲ್ ಹಾಗೂ ಸಾರಿಗೆ ಸಿಬ್ಬಂದಿಗಳು ಮತ್ತು ಸ್ಥಳೀಯ ಗ್ರಾಮಸ್ಥರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.