ವಿದ್ಯಾರ್ಥಿ ಜೀವನ ಅತ್ಯಂತ ಪರಮಶ್ರೇಷ್ಟ ಜೀವನ : ಪಂ.ಎಂ.ವೆಂಕಟೇಶ್ ಕುಮಾರ್

ದಾಂಡೇಲಿ : ಪ್ರತಿಯೊಬ್ಬರ ಜೀವನದಲ್ಲಿಯೂ ಅತ್ಯಂತ ಪರಮಶ್ರೇಷ್ಟ ಜೀವನ ವಿದ್ಯಾರ್ಥಿ ಜೀವನ. ವಿದ್ಯಾರ್ಥಿ ಜೀವನವನ್ನು ಸಮರ್ಪಕವಾಗಿ ಸದ್ಬಳಕೆ ಮಾಡಿದಾಗ ಮಾತ್ರ ಸದೃಢ ಬದುಕು ಕಟ್ಟಿಕೊಳ್ಳಲು ಸಾಧ್ಯ. ವಿದ್ಯಾರ್ಥಿಗಳು ಸತತ ಅಧ್ಯಯನಶೀಲರಾಗುವುದರ ಜೊತೆಗೆ ಕಲೆ, ಕ್ರೀಡೆ ಹೀಗೆ ಇನ್ನಿತರ ಚಟುವಟಿಕೆಗಳಲ್ಲಿಯೂ ತೊಡಗಿಸಿಕೊಳ್ಳಬೇಕು. ಕಲೆಯಲ್ಲಿ ನಮ್ಮ ನಾಡಿನ ಘನ ಪರಂಪರೆಯನ್ನು ಕಟ್ಟಿಕೊಡಲು ಸಾಧ್ಯವಿದೆ. ಸಾಹಿತ್ಯ, ಸಂಗೀತಗಳಿಂದ ಮಾನಸಿಕ ನೆಮ್ಮದಿಯ ಜೊತೆಗೆ ಸಮಾಜವನ್ನು ಪರಿವರ್ತಿಸಬಹುದಾಗಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಸದಾಭಿರುಚಿಯ ಮತ್ತು ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗುವಂತಹ ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕೆಂದು ಖ್ಯಾತ ಹಿಂದುಸ್ತಾನಿ ಗಾಯಕ ಹಾಗೂ ಪದ್ಮಶ್ರೀ ಪುರಸ್ಕೃತರಾದ ಪಂ.ಎಂ.ವೆಂಕಟೇಶ್ ಕುಮಾರ್ ಅವರು ನುಡಿದರು.

ಅವರು ಮಂಗಳವಾರ ನಗರದ ಅಂಬೇವಾಡಿಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ವಾರ್ಷಿಕ ಸ್ನೇಹ ಸಮ್ಮೇಳನ, ಬಹುಮಾನ ವಿತರಣೆ ಹಾಗೂ ವಿವಿಧ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು. ಕಲಾವಿದರನ್ನು ಬೆಳೆಸುವ ಮೂಲಕ ನಮ್ಮ ನಾಡಿನ ಕಲೆಯನ್ನು ಉಳಿಸಬೇಕು. ಹಾಗಾದಾಗ ಮಾತ್ರ ಹೆಚ್ಚು ಹೆಚ್ಚು ಕಲಾವಿದರ ಸೃಷ್ಟಿಯಾಗಲು ಸಾಧ್ಯವಿದೆ ಎಂದು ಹೇಳಿ ಈ ಕಾಲೇಜಿನ ಶೈಕ್ಷಣಿಕ ಗುಣಮಟ್ಟವನ್ನು ಕೊಂಡಾಡಿದರು.

ಇನ್ನೋರ್ವ ಮುಖ್ಯ ಅತಿಥಿ ಪದ್ಮಶ್ರೀ ಪುರಸ್ಕೃತ ವೃಕ್ಷಮಾತೆ ತುಳಸಿ ಗೌಡ ಅವರು ಮಾತನಾಡಿ ಮಗುವನ್ನು ಸಾಕಿ ಬೆಳೆಸಿ ದೊಡ್ಡವರನ್ನಾಗಿ ಮಾಡುವಂತೆ ಮರ ಗಿಡಗಳನ್ನು ಬೆಳೆಸಿ, ಪೋಷಣೆ ಮಾಡಿದಾಗ ಮಾತ್ರ ಸಮೃದ್ಧ ಅರಣ್ಯ ಉಳಿಯಲು ಮತ್ತು ಬೆಳೆಯಲು ಸಾಧ್ಯ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಹಚ್ಚ ಹಸಿರ ಪರಿಸರ ನಿಮರ್ಾಣದ ಸೇನಾನಿಗಳಾಗಬೇಕೆಂದು ಕರೆ ನೀಡಿದರು.

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಉಸ್ತಾದ್.ಕೆ.ಎಲ್.ಜಮಾದಾರ, ಧಾರವಾಡದ ಹಿರೇಮಲ್ಲೂರು ಈಶ್ವರನ್ ಪದವಿ ಪೂರ್ವ ಮಹಾ ವಿದ್ಯಾಲಯದ ಪ್ರಾಚಾರ್ಯರಾದ ಶಶಿಧರ್ ತೋಡಕರ್ ಅವರು ಮಾತನಾಡಿ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಈ ಕಾಲೇಜಿನ ವಾತವರಣ ಪೂರಕವಾಗಿದೆ ಎಂದು ಹೇಳಿ ಕಾಲೇಜಿನ ಕಾರ್ಯಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಕಾಲೇಜಿನ ಪ್ರಾಚಾರ್ಯರಾದ ಡಾ.ಎಂ.ಡಿ.ಒಕ್ಕುಂದ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಈ ಸಂದರ್ಭದಲ್ಲಿ ಪಂ.ಎಂ.ವೆಂಕಟೇಶ್ ಕುಮಾರ್, ವೃಕ್ಷಮಾತೆ ತುಳಸಿ ಗೌಡ, ಉಸ್ತಾದ್ ಕೆ.ಎಲ್.ಜಮಾದಾರ್, ಶಶಿಧರ್ ತೋಡಕರ್ ಅವರನ್ನು ಹಾಗೂ ತಾಲ್ಲೂಕಿನ ಪತ್ರಕರ್ತರನ್ನು ಕಾಲೇಜಿನ ವತಿಯಿಂದ ಗೌರವಪೂರ್ವಕವಾಗಿ ಸನ್ಮಾನಿಸಲಾಯ್ತು.