ಪರಿಸರ ಮತ್ತು ಅರಣ್ಯ ರಕ್ಷಣೆ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಹಮ್ಮಿಕೊಂಡ ಲಕ್ಷ ವೃಕ್ಷ ಗಿಡ ನೆಡುವ ಕಾರ್ಯಕ್ರಮಕ್ಕೆ ಜಿಲ್ಲಾದ್ಯಂತ ವ್ಯಾಪಕ ಸ್ಪಂದನೆ


ಯಲ್ಲಾಪುರ: ಅರಣ್ಯವಾಸಿಗಳು ಹೆಚ್ಚಿನ ಆಸಕ್ತಿಯಿಂದ ಅಭಿಯಾನದಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂದು ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದ್ದಾರೆ.
ಲಕ್ಷ ವೃಕ್ಷ ಗಿಡ ನೆಡುವ ಅಭಿಯಾನದ ಅಂಗವಾಗಿ ತಾಲೂಕಿನ ಕಿರವತ್ತಿಯಲ್ಲಿ ಮಂಗಳವಾರ ಗಿಡ ನೆಡುವ ಕಾರ್ಯದಲ್ಲಿ ಭಾಗವಹಿಸಿ ಮಾತನಾಡಿದರು. ಅರಣ್ಯವಾಸಿಗಳು ಅರಣ್ಯ ಭೂಮಿ ಹಕ್ಕಿಗಾಗಿ ಹೋರಾಟ ಮಾಡುವುದೊಂದಿಗೆ, ಅರಣ್ಯ ಸಾಂದ್ರತೆಯನ್ನ ಹೆಚ್ಚಿಸುವಲ್ಲಿ ಸಕ್ರೀಯರಾಗಿರಬೇಕು. ಅರಣ್ಯ ರಕ್ಷಣೆ ಮತ್ತು ಪಾಲನೆ ಮಾಡುವ ಜೊತೆಯಲ್ಲಿ, ಅರಣ್ಯ ಭೂಮಿಯ ಮೇಲೆ ಕೃಷಿ ಜೀವನದ ಮೇಲೆ ಅವಲಂಭಿತವಾಗಿರಬೇಕೆಂದು ಅವರು ಹೇಳಿದರು.
ಭೌಗೋಳಿಕವಾಗಿ ಉತ್ತರ ಕನ್ನಡ ಜಿಲ್ಲೆಯ ಅರಣ್ಯ ಪ್ರದೇಶ ಶೇ. 80 ರಷ್ಟು ಇದ್ದರೂ, ಅರಣ್ಯ ಸಾಂದ್ರತೆಯ ಪ್ರಮಾಣ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿರುವುದು ವಿಷಾದಕರ ಎಂದರು.
ಜುಲೈ 31 ರಂದು ಪ್ರಾರಂಭವಾದ ಲಕ್ಷ ವೃಕ್ಷ ಗಿಡ ನೆಡುವ ಕಾರ್ಯಕ್ರಮವು ಆಗಸ್ಟ 14 ರವರೆಗೂ ಜಿಲ್ಲಾದ್ಯಂತ ಮನೆ, ಮನೆಗಳಲ್ಲಿ ನಡೆಯುತ್ತಿರುವುದರಿಂದ, ಅಂದಿನವರೆಗೆ ಅರಣ್ಯ ಅತಿಕ್ರಮಣದಾರರು ಪ್ರತಿ ಮನೆ, ಮನೆಯಲ್ಲಿಯೂ ಗಿಡ ನೆಡುವ ಕಾರ್ಯ ಹಮ್ಮಿಕೊಳ್ಳಬೇಕೆಂದು ವಿನಂತಿಸಿದರು.‌
ವೇದಿಕೆಯ ತಾಲೂಕು ಅಧ್ಯಕ್ಷ ಭೀಮ್ಸಿ(Bhimsi) ವಾಲ್ಮೀಕಿ,(Valmiki )ಸೈಯದ್ ಸಾಬ (Syed Saab) ನೂಜವರ,(Noojavar )ಲಲಿತಾ ನಾಯ್ಕ,(Lalita naik )ಈರಪ್ಪ ಅಲಕೇರಿ,( Erapp Alakeri) ಉಪಸ್ಥಿತರಿದ್ದರು.