ಕುಮಟಾ ಹವ್ಯಕ ಸಮಾಜ ಇಂದು ವಿಷಮ ಪರಿಸ್ಥಿತಿಯನ್ನು ಎದುರಿಸುತ್ತಿದೆ. ರಾಜಕೀಯವಾಗಿ, ಸಾಮಾಜಿಕವಾಗಿ ನಮ್ಮನ್ನು ಅವಕಾಶ ವಂಚಿತರನ್ನಾಗಿ ಮಾಡಲಾಗುತ್ತಿದೆ. ಎಲ್ಲಾ ಹಂತಗಳಲ್ಲೂ ನಾವು ತುಳಿತಕ್ಕೊಳಗಾಗುತ್ತಿದ್ದೇವೆ. ತಮ್ಮ ಬುದ್ಧಿವಂತಿಕೆಯಿಂದಲೇ ಬದುಕು ಕಟ್ಟಿಕೊಂಡಿರುವ ಹವ್ಯಕರನ್ನು ಹಿಯಾಳಿಸಿ ಮಾತನಾಡುವ ಪ್ರವೃತ್ತಿ ಹೆಚ್ಚುತ್ತಿದೆ. ಇವೆಲ್ಲಕ್ಕೂ ಪರಿಹಾರ ಕಂಡುಕೊಳ್ಳುವ ಅನಿವಾರ್ಯತೆ ನಮ್ಮ ಮುಂದಿದೆ. ಆದ್ದರಿಂದ ಸಂಘಟನೆಯ ಅವಶ್ಯಕತೆ ಇದೆ ಎಂದು ಎಂ.ಜಿ.ಭಟ್ಟ ನುಡಿದರು. ಅವರು ಕುಮಟಾ ತಾಲೂಕಿನ ಹೆಗಡೆಯಲ್ಲಿ ವಿಪ್ರ ಒಕ್ಕೂಟ ಹೆಗಡೆಯ ವತಿಯಿಂದ ನಡೆಯುತ್ತಿರುವ “ಚತುರ್ವೇದ ಸ್ವಾಹಾಕಾರ” ದ ಅಂಗವಾಗಿ ನಡೆದ ” ಸಾಧಕರ ಪುರಸ್ಕಾರ” ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಭುವನ್ ಭಾಗ್ವತ ಮಾತನಾಡಿ “ನಾವು ನಮ್ಮವರು ಎನ್ನುವ ಭಾವನೆ ನಮಗಿರಬೇಕು. ಎಲ್ಲಾ ಸಣ್ಣ ಸಣ್ಣ ವಿಚಾರಗಳನ್ನು ಬದಿಗಿಟ್ಟು ವಿಶಾಲ ಮನಸ್ಸಿನಿಂದ ಒಂದಾಗಬೇಕು. ಎಲ್ಲಾ ಕ್ಷೇತ್ರಗಳಲ್ಲೂ ನಮ್ಮವರು ಎನ್ನುವ ಅಭಿಮಾನದಿಂದ ಬೆಂಬಲಿಸುವ ಮನೋಭಾವ ಬೆಳೆಸಿಕೊಳ್ಳಬೇಕು” ಎಂದರು. ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಂದ್ರ ಭಟ್ಟ ರವರು ಉತ್ತಮ ಸಂಘಟನೆಯ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದರು. ವೇದಮೂರ್ತಿ ವಿನಾಯಕ ಭಟ್ಟರವರು ಚತುರ್ವೇದ ಸ್ವಾಹಾಕಾರದ ಆಚರಣೆಯ ಮಹತ್ವ ಅದರ ಪರಿಣಾಮಗಳ ಕುರಿತು ಮಾತನಾಡಿ ಅಪರೂಪದ ಕಾರ್ಯಕ್ರಮವನ್ನು ಸಂಘಟಿಸಿದ ವಿಪ್ರ ಒಕ್ಕೂಟದ ಕಾರ್ಯ ಅಭಿನಂದನಾರ್ಹ. ಇಂತಹ ಕಾರ್ಯಕ್ರಮಗಳು ಎಲ್ಲಾ ಕಡೆಯೂ ನಡೆಯುವಂತಾಗಲಿ ಎಂದರು. ಕುಮಟಾ ಮಂಡಲಾಧ್ಯಕ್ಷ ಜಿ.ಎಸ್.ಹೆಗಡೆ. ಉದ್ಯಮಿ ಸುಬ್ರಾಯ ಭಟ್ಟ ಮೂರೂರು, ಖ್ಯಾತ ಆಯುರ್ವೇದ ವೈದ್ಯರಾದ ಡಾ.ನಾಗರಾಜ ಭಟ್ಟ ಉಪಸ್ಥಿತರಿದ್ದರು.
ವೈದ್ಯಕೀಯ ರಂಗದ ಸಾಧಕರಾದ ಡಾ.ನಾರಾಯಣಭಟ್ಟ, ಡಾ.ರವಿ ಉಪಾಧ್ಯ, ಡಾ.ಸ್ಮಿತಾ ಉಪಾಧ್ಯ, ಡಾ.ಅರ್ಚನಾ ಹೆಗಡೆ, ಡಾ.ನಮೃತಾ ಹೆಗಡೆ ಹಾಗೂ ವಾಣಿಜ್ಯ ಕ್ಷೇತ್ರದ ಸಾಧಕ ಕೆ.ಜಿ.ಹೆಗಡೆಯವರನ್ನು ಸನ್ಮಾನಿಸಲಾಯಿತು. ಸಮಾಜದ ಬಡ ವಿದ್ಯಾರ್ಥಿಗಳಿಗೆ “ಆರ್ತತ್ರಾಣ ನಿಧಿ” ಯಿಂದ 39,000/- ರೂ ಗಳನ್ನು ವಿತರಿಸಲಾಯಿತು.
ಸಾಮವೇದ ಘೋಷದೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಡಾ.ಗೋಪಾಲಕೃಷ್ಣ ಹೆಗಡೆ ಪ್ರಾಸ್ತಾವಿಕ ಮಾತಿನೊಂದಿಗೆ ಸ್ವಾಗತಿಸಿದರು. ರವೀಂದ್ರ ಭಟ್ಟ ಸೂರಿ ಕಾರ್ಯಕ್ರಮ ನಿರೂಪಿಸಿದರು. ಮಂಜುನಾಥ ಎಸ್ ಹೆಗಡೆ , ಪಿ.ಆರ್.ಹೆಗಡೆ, ಪ್ರಕಾಶ ಹೆಗಡೆ, ಗೋದಾವರಿ ಹೆಗಡೆ, ಸುಧಾ ಶಾಸ್ತ್ರಿ, ಪ್ರಭಾಕರ ಎಚ್.ಪಿ, ಜಿ.ಕೆ.ಭಟ್ಟ ಸೂರಿ ಶ್ರೀಧರ ಹೆಗಡೆ ಮುಂತಾದವರು ಸಹಕರಿಸಿದರು.