ಹಳಿಯಾಳ : ದಾಂಡೇಲಿ ನಗರದ ಸುಭಾಷ್ ನಗರದಿಂದ ನಾಪತ್ತೆಯಾಗಿದ್ದ ವೃದ್ಧೆಯನ್ನು ಹಳಿಯಾಳ ಪಟ್ಟಣದ ದೇಶಪಾಂಡೆ ನಗರದ ನಿವಾಸಿಗಳಾದ ಬಸವರಾಜ ಗೌಳಿ, ಅಷ್ಪಾಕ್ ನೂರ್ ಖಾನ್ ಸೇರಿದಂತೆ ಸ್ಥಳೀಯ ನಿವಾಸಿಗಳು ಹಳಿಯಾಳ ಪೊಲೀಸ್ ಠಾಣೆಗೆ ಮಾಹಿತಿ ನೀಡಿ, ಪೊಲೀಸರ ಸುಪರ್ಧಿಗೆ ಒಪ್ಪಿಸಿದ್ದರು.
ಹಳಿಯಾಳದ ಪೊಲೀಸರು ವೃದ್ಧೆ ರಮ್ಜಾನಬಿಯವರ ಕುಟುಂಬಸ್ಥರಿಗೆ ಸಂಪರ್ಕಿಸಿ, ಅವರನ್ನು ಠಾಣೆಗೆ ಕರೆಸಿ, ಕುಟುಂಬಸ್ಥರಿಗೆ ಒಪ್ಪಿಸಿದ್ದಾರೆ. ಪಟ್ಟಣದ ದೇಶಪಾಂಡೆ ನಗರದ ನಿವಾಸಿಗಳು ಅನುಮಾನಗೊಂಡು ರಮ್ಜಾನುಬಿಯವರನ್ನು ತಡೆದು ನಿಲ್ಲಿಸಿ ಮಾತನಾಡಿಸಿದಾಗ ಕಣ್ತಪ್ಪಿ ಬಂದಿರುವುದನ್ನು ರಮ್ಜಾನಬಿಯವರು ಸ್ಪಷ್ಟಪಡಿಸಿದ್ದರು. ಆನಂತರ ರಮ್ಜಾನಬಿಯವರನ್ನು ಸಂತೈಸಿ, ಊಟೋಪೊಚಾರವನ್ನು ನೀಡಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ತಡರಾತ್ರಿಯಲ್ಲಿಯೆ ಪೊಲೀಸರು ದೇಶಪಾಂಡೆ ನಗರಕ್ಕೆ ಭೇಟಿ ನೀಡಿ ರಮ್ಜಾನಬಿಯವರನ್ನು ಠಾಣೆಗೆ ಕರೆದುಕೊಂಡು ಹೋಗಿ, ಕುಟುಂಬಸ್ಥರಿಗೆ ಮಾಹಿತಿಯನ್ನು ನೀಡಿದ್ದರು. ಇಂದು ಸೋಮವಾರ ನಸುಕಿನ ವೇಳೆಯಲ್ಲಿ ರಮ್ಜಾನಬಿಯವರನ್ನು ಅವರ ಕುಟುಂಬಸ್ಥರಿಗೆ ಪೊಲೀಸರು ಒಪ್ಪಿಸಿದ್ದಾರೆ.