ಕುಮಟಾ : ಕಳೆದ ಎರಡು ದಿನದಿಂದ ಎಡಬಿಡದೆ ಸುರಿಯುತ್ತಿರುವ ಮಳೆ ಹಾಗೂ ಬೀಸುತ್ತಿರುವ ಭಾರೀ ಗಾಳಿಯ ಪರಿಣಾಮ, ನಗರದ ಉಪ್ಪಿನ ಗಣಪತಿಯ ಗುಮ್ಮನ ಕೇರಿಯಲ್ಲಿ ಬೃಹತ್ ಗಾತ್ರದ ಆಲದ ಮರ ಬುಡಸಮೇತ ಕಿತ್ತುಬಿದ್ದಿದೆ. ಮರದಡಿ ಸಿಲುಕಿದ ಎರಡು ಮನೆಗಳು ಸಂಪೂರ್ಣ ಜಖಂ ಆಗಿದೆ.
ಗಂಗಾಧರ ತಿಮ್ಮಣ್ಣ ಗೌಡ ಮತ್ತು ಗಣೇಶ ತಿಮ್ಮಣ್ಣ ಗೌಡ ಇವರಿಗೆ ಸೇರಿದ ಮನೆ ಇದಾಗಿದ್ದು, ಮರ ಬಿದ್ದ ಪರಿಣಾಮ ಗಂಗಾಧರ ಗೌಡ ಇವರ ಮನೆ ಸಂಪೂರ್ಣ ನುಜ್ಜುಗುಜ್ಜಾಗಿದೆ. ಗಣೇಶ ಗೌಡರವರ ಮನೆ ಭಾಗಶಃ ಹಾನಿಗೊಂಡಿದೆ. ಮರ ಮುರಿದುಬೀಳುವ ಸದ್ದು ಕೇಳಿ ಕುಟುಂಬದ ಸದಸ್ಯರು ನಿದ್ದೆಗಣ್ಣಿನಲ್ಲಿ ಎದ್ದು ಹೊರಗೆ ಓಡಿ ಬಂದಿದ್ದರಿಂದ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.
ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಮತ್ತು ಪುರಸಭೆ ಅಧಿಕಾರಿಗಳು ಭೇಟಿ ನೀಡಿ ಮೊಹಜರು ನಡೆಸಿದ್ದಾರೆ. ಪುರಸಭಾ ಸದಸ್ಯೆ ಮೋಹಿನಿ ಗೌಡ, ಶ್ರೀಧರ ಗೌಡ ಮತ್ತು ಗ್ರಾಮಸ್ಥರು ಸ್ಥಳಕ್ಕೆ ಭೇಟಿ ನೀಡಿ ಕುಟುಂಬದವರೊಂದಿಗೆ ಮತ್ತು ಅಧಿಕಾರಿಗಳೊಂದಿಗೆ ಚರ್ಚಿಸಿದರು. ಹಾನಿಗೆ ಹೆಚ್ಚಿನ ಮೊತ್ತದ ಪರಿಹಾರವನ್ನು ದೊರಕಿಸಿ ಕೊಡುವಂತೆ ಶಾಸಕರಾದ ದಿನಕರ ಶೆಟ್ಟಿ ಅವರಿಗೆ ವಿನಂತಿಸಲಾಗಿ ಅವರು ತಹಶೀಲ್ದಾರ್ ಮತ್ತು ಪುರಸಭೆಯ ಮುಖ್ಯಾಧಿಕಾರಿಗಳೊಂದಿಗೆ ಮಾತನಾಡಿ ಹೆಚ್ಚಿನ ಪರಿಹಾರ ನೀಡುವ ಭರವಸೆ ನೀಡಿದ್ದಾರೆ.
ಆರ್ಥಿಕವಾಗಿ ಹಿಂದುಳಿದಿರುವ ಹಾಲಕ್ಕಿ ಸಮಾಜದ ಈ ಸಂತ್ರಸ್ತ ಕುಟುಂಬ ಪರಿಹಾರ ಮೊತ್ತದ ಭರವಸೆಯಲ್ಲಿದ್ದಾರೆ. ಮುಂಜಾನೆ ರಭಸವಾಗಿ ಮಳೆ ಸುರಿಯುತ್ತಿದ್ದರಿಂದ ಮಧ್ಯಾಹ್ನದ ಹೊತ್ತಿಗೆ ಮನೆಯ ಮೇಲೆ ಬಿದ್ದ ಬೃಹತ್ ಗಾತ್ರದ ಮರದ ತೆರವಿನ ಕಾರ್ಯ ಮಾಡಲಾಗಿದೆ.