ಸೋರುತ್ತಿರುವ ಜೋಯಿಡಾ ತಹಶೀಲ್ದಾರ್ ಕಾರ್ಯಾಲಯದ ಭೂ ಮಾಪನಾ ಕಚೇರಿ

ಜೋಯಿಡಾ : ತಾಲ್ಲೂಕಿನಲ್ಲಿ ಕಳೆದ ಒಂದು ವಾರದಿಂದ ಸುರಿಯುತ್ತಿರುವ ರಣಭೀಕರ ಮಳೆಗೆ ತಾಲ್ಲೂಕಿನ ವಿವಿಧ ಇಲಾಖೆಗಳ ಹಳೆಯ ಕಟ್ಟಡಗಳು ಬೀಳುವ ಹಂತಕ್ಕೆ ಬಂದಿವೆ.

ತಾಲ್ಲೂಕಿನ ತಹಶೀಲ್ದಾರ್ ಕಚೇರಿಯಲ್ಲಿರುವ ಭೂ ಮಾಪನಾ ಇಲಾಖಾ ಕಚೇರಿಯ ಹಿಂದಿನ ಗೋಡೆ ಬೀಳುವ ಹಂತ ತಲುಪಿದೆ. ಪ್ರತಿ ದಿನ ಗೋಡೆಯಿಂದ ಬರುವ ನೀರನ್ನು ಬಕೆಟ್ ಮೂಲಕ ತುಂಬಿಸಿಕೊಂಡು ಹೊರ ಹಾಕಲಾಗುತ್ತಿದೆ. ಕಳೆದ 40 ವರ್ಷಗಳ ಹಿಂದೆ ಕಟ್ಟಿದ ಈ ಕಟ್ಟಡದ ಎಲ್ಲಾ ಕಡೆಯೂ ಸೋರುತ್ತಿದ್ದು, ಇಲ್ಲಿ ಅಧಿಕಾರಿಗಳು, ಸಿಬ್ಬಂದಿಗಳು ಜೀವ ಭಯದಲ್ಲೇ ಕೆಲಸ ಮಾಡಬೇಕಾದ ಸ್ಥಿತಿಯಿದೆ. ಸಂಬಂಧ ಪಟ್ಟವರು ಇಲ್ಲಿರುವ ಭೂಮಾಪನ ಇಲಾಖೆಯ ಕಚೇರಿಯನ್ನು ಕೂಡಲೇ ಮಿನಿ ವಿಧಾನ ಸೌಧಕ್ಕೆ ವರ್ಗಾಯಿಸುವುದೇ ಸಧ್ಯಕ್ಕೆ ಉಳಿದಿರುವ ಏಕೈಕ ಪರಿಹಾರವಾಗಿದ್ದು, ಈ ನಿಟ್ಟಿನಲ್ಲಿ ಮೇಲಾಧಿಕಾರಿಗಳು ಅಗತ್ಯ ಕ್ರಮವನ್ನು ಕೈಗೊಳ್ಳಬೇಕಾಗಿದೆ.