ದಾಂಡೇಲಿ : ಕರ್ನಾಟಕ ರಾಜ್ಯದ ಮುನ್ಸಿಪಲ್ ಕಾರ್ಮಿಕರ ಸಂಘದ ಅಧ್ಯಕ್ಷರು ಹಾಗೂ ಸಿಐಟಿಯು ರಾಜ್ಯ ಮುಖಂಡರು ಮತ್ತು ಲೇಖಕರು, ಸಾಹಿತಿಗಳು ಆಗಿದ್ದ ಹೋರಾಟಗಾರ ಹರೀಶ್ ನಾಯ್ಕ ಅವರು ಇಂದು ಸೋಮವಾರ ನಸುಕಿನ ವೇಳೆಯಲ್ಲಿ ರಾಮನಗರದಲ್ಲಿ ವಿಧಿವಶರಾದರು. ಮೃತರಿಗೆ 71 ವರ್ಷ ವಯಸ್ಸಾಗಿತ್ತು.
ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಮಂಡಳಿಯ ಸದಸ್ಯರು, ಸಿಐಟಿಯುನ ರಾಜ್ಯ ಉಪಾಧ್ಯಕ್ಷರು, ದಾಂಡೇಲಿ ನಗರಸಭೆಯ ಮಾಜಿ ಉಪಾಧ್ಯಕ್ಷರಾಗಿಯೂ ಸೇವೆಯನ್ನು ಸಲ್ಲಿಸಿದ್ದರು. ಕರ್ನಾಟಕ ರಾಜ್ಯ ಮುನ್ಸಿಪಲ್ ಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷರಾಗಿ ಮುನ್ಸಿಪಲ್ ಕಾರ್ಮಿಕರ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ರಾಜ್ಯವ್ಯಾಪಿ ಹೋರಾಟಗಳನ್ನು ಯಶಸ್ವಿಯಾಗಿ ಹಮ್ಮಿಕೊಂಡ ಹೆಗ್ಗಳಿಕೆ ಹರೀಶ್ ನಾಯ್ಕ ಅವರಿಗೆ ಸಲ್ಲುತ್ತದೆ.
ಸಿಐಟಿಯು ಸಂಘಟನೆಯ ಜಿಲ್ಲಾಧ್ಯಕ್ಷರಾಗಿ ಮೂರು ಅವಧಿಯಲ್ಲಿ ಕಾರ್ಯನಿರ್ವಹಿಸಿದ್ದರು. ಕಟ್ಟಡ ಕಾರ್ಮಿಕರ ಸಂಘದ ರಾಜ್ಯ ಉಪಾಧ್ಯಕ್ಷರಾಗಿಯೂ ಸೇವೆ ನೀಡಿದ್ದರು.ಪ್ರಾರಂಭದಲ್ಲಿ ಹಂಚು ಕಾರ್ಮಿಕರ ಸಂಘ, ಪಂಚಾಯತ್ ಕಾರ್ಮಿಕರು, ಕಾರವಾರದಲ್ಲಿ ಗ್ರಾಸಿಂ ಗುತ್ತಿಗೆ ಕಾರ್ಮಿಕರ ಸಂಘ, ಕದ್ರಾ, ಅಂಬಿಕಾನಗರ, ಗಣೇಶ್ ಗುಡಿ ವಿದ್ಯುತ್ ಗುತ್ತಿಗೆ ಕಾರ್ಮಿಕರ ಸಂಘ, ಕೈಗಾ ಅಣು ವಿದ್ಯುತ್ ಸ್ಥಾವರ ಗುತ್ತಿಗೆ ಕಾರ್ಮಿಕರ ಸಂಘ, ವನ್ಯಜೀವಿ ಗುತ್ತಿಗೆ ಕಾರ್ಮಿಕರ ಸಂಘ, ಕಟ್ಟಡ ಕಾರ್ಮಿಕರು ಮತ್ತು ಗ್ರಾಮೀಣ ಕೆಲಸಗಾರರ ಸಂಘ ಹೀಗೆ ಅನೇಕ ವಿಭಾಗದ ಕಾರ್ಮಿಕರನ್ನು ಸಂಘಟಿಸುವಲ್ಲಿ ಹರೀಶ್ ನಾಯ್ಕ ಅವರ ಪಾತ್ರ ಸ್ಮರಣೀಯ. ಅಂಗನವಾಡಿ ನೌಕರರು, ಅಕ್ಷರದಾಸೋಹ, ಆಶಾ ಕಾರ್ಯಕರ್ತರ ಹೋರಾಟಗಳಿಗೆ ಸದಾ ಮಾರ್ಗದರ್ಶನ ನೀಡುತ್ತಿದ್ದರು. ಹಳಿಯಾಳ ರೈತ ಹೋರಾಟದಲ್ಲಿ, ಮಾವಳಂಗಿ ಭೂಮಿ ಹೋರಾಟದಲ್ಲಿ ಅವರು ನಿರ್ಣಾಯಕ ಪಾತ್ರ ವಹಿಸಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.
ಹರೀಶ್ ನಾಯ್ಕ ಸ್ವತಃ ಲೇಖಕರು, ಕವಿಗಳು, ಕಾರ್ಮಿಕ ಕಾನೂನುಗಳನ್ನು ಅರಿತವರು ಹೌದು. ಕನ್ನಡ ಸಾರಸ್ವತ ಲೋಕಕ್ಕೆ ಅವರು ಅನೇಕ ಸಾಹಿತ್ಯ ಕೃತಿಗಳನ್ನು ನೀಡಿರುವುದು ಉಲ್ಲೇಖನೀಯ.ಹರೀಶ್ ನಾಯ್ಕ ಅವರು ಮೂಲತಃ ಕಾರವಾರದವರು. ಸ್ನಾತಕೋತ್ತರ ಪದವಿ ಪಡೆದ ಇವರು ದಾಂಡೇಲಿಯ ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯಲ್ಲಿ ಕಾರ್ಮಿಕರಾಗಿ, ಕಾರ್ಮಿಕ ನಾಯಕರಾಗಿ ಸೇವೆ ಸಲ್ಲಿಸಿದರು.
ಕಾಲೇಜು ಶಿಕ್ಷಣ ಮುಗಿದ ಬಳಿಕ ಭಾರತೀಯ ಸೈನ್ಯಕ್ಕೆ ಸೇರಿದ್ದ ಹರೀಶ ನಾಯ್ಕ ಅವರು ಅಲ್ಲಿ ಕೆಲ ವರ್ಷ ಸೇವೆಯನ್ನು ಸಲ್ಲಿಸಿದ್ದರು. ಅಲ್ಲಿ ಕರ್ತವ್ಯದಲ್ಲಿರುವ ಸಂದರ್ಭದಲ್ಲಿ ಮೇಲಾಧಿಕಾರಿಯೊಬ್ಬರು ಕನ್ನಡಕ್ಕೆ ಅವಮಾನ ಮಾಡಿ ಮಾತನಾಡಿದರೂ ಎಂಬ ಒಂದೇ ಒಂದು ಕಾರಣಕ್ಕೆ ಅದನ್ನು ತೀವ್ರವಾಗಿ ವಿರೋಧಿಸಿ, ಆ ಕ್ಷಣದಿಂದಲೇ ಕೆಲಸಕ್ಕೆ ರಾಜಿನಾಮೆ ಎಸೆದು ಕನ್ನಡದ ಬಗ್ಗೆ ಇರುವ ಅಭಿಮಾನವನ್ನು ಸಾರಿ, ಕನ್ನಡದ ಹೆಮ್ಮೆಯ ಕುವರ ಎಂದೆನಿಸಿಕೊಂಡಿದ್ದರು.ದಾಂಡೇಲಿಯ ನಿವಾಸಿಯಾಗಿದ್ದ ಹರೀಶ ನಾಯ್ಕ ಅವರು ಇತ್ತೀಚೆಗೆ ಜೋಯಿಡಾದ ರಾಮನಗರದಲ್ಲಿ ವಾಸವಿದ್ದರು. ರಾಮನಗರದಲ್ಲಿರುವ ಅವರ ಸ್ವಗೃಹದಲ್ಲಿ ವಿಧಿವಶರಾಗಿದ್ದು, ಇಂದು ಸಂಜೆ 5 ಗಂಟೆಯವರೆಗೆ ಅವರ ಅಂತಿಮ ದರ್ಶನ ದೊರೆಯಲಿದೆ. ಅವರು ಬೆಳಗಾವಿಯ ಕೆ.ಎಲ್.ಇ ಗೆ ದೇಹದಾನ ಮಾಡುವುದರ ಬಗ್ಗೆ ಪತ್ರಕೂಡ ಮಾಡಿದ್ದಾರೆಂದು ಅವರ ಆಪ್ತವಲಯದಿಂದ ಮಾಹಿತಿ ಲಭ್ಯವಾಗಿದೆ.
ಮೃತರು ಪತ್ನಿ, ಓರ್ವ ಪುತ್ರ ಹಾಗೂ ಅಪಾರ ಸಂಖ್ಯೆಯಲ್ಲಿ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ನಿಧನಕ್ಕೆ ಗಣ್ಯರನೇಕರು ಕಂಬನಿಯನ್ನು ಮಿಡಿದು ಸಂತಾಪವನ್ನು ಸೂಚಿಸಿದ್ದಾರೆ.