ದಾಂಡೇಲಿ: ಕೋವಿಡ್ ಕಾರಣ ನೀಡಿ ಕಳೆದ ಮೂರು ವರ್ಷಗಳಿಂದ ಸ್ಥಗಿತ ಗೊಂಡಿರುವ ದಾಂಡೇಲಿ -ಧಾರವಾಡ ರೈಲು ಸಂಚಾರವನ್ನು ಬೆಂಗಳೂರಿನವರೆಗೂ ವಿಸ್ತರಿಸಿ ಪುನಾರಂಭಿಸಲು ದಾಂಡೇಲಿ ಸಮಗ್ರ ಅಭಿವೃದ್ಧಿ ಹೋರಾಟ ಸಮಿತಿಯ ಪದಾಧಿಕಾರಿಗಳು ಇಂದು ಹುಬ್ಬಳ್ಳಿಗೆ ತೆರಳಿ ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ ಮತ್ತು ಹುಬ್ಬಳ್ಳಿ ರೇಲ್ವೆ ವಿಭಾಗದ ಆಯುಕ್ತರಿಗೆ ಮನವಿ ಸಲ್ಲಿಸಿದರು.
26 ವರ್ಷಗಳಿಂದ ಸ್ಥಗಿತಗೊಂಡಿದ್ದ ದಾಂಡೇಲಿ – ಅಳ್ಳಾವರ ಪ್ರಯಾಣಿಕರ ರೈಲು ಸಂಚಾರವನ್ನು 2019 ನವೆಂಬರ 3 ರಂದು ದಾಂಡೇಲಿ – ಧಾರವಾಡ ಮಾರ್ಗವಾಗಿ ಬದಲಿಸಿ ಪುನಾರಂಭಿಸಲಾಗಿತ್ತು. ಆದರೆ ವಿಶ್ವಕ್ಕೆ ಕರಾಳತೆಯ ಭೀತಿ ಮೂಡಿಸಿದ್ದ ಕೊರೊನಾ ಸಾಂಕ್ರಾಮಿಕ ರೋಗದ ಭೀತಿಯಿಂದ ಪ್ರಯಾಣಿಕ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು, ಹಾಗೆಯೇ ಕಳೆದ ಒಂದುವರೆ ವರ್ಷಗಳಿಂದ ಕಾಮಗಾರಿ ನಡೆಸಿ ದಾಂಡೇಲಿ – ಧಾರವಾಡ ಮಾರ್ಗವನ್ನು ವಿದ್ಯುತ್ ಚಾಲಿತ ಮಾರ್ಗವನ್ನಾಗಿ ಬದಲಿಸಿ ಆಧುನಿಕರಣ ಗೊಳಿಸಲಾಗಿದೆ. ಆದರೆ ಕೊರೊನಾ ಭೀತಿ ಮಾಯವಾಗಿ ವರ್ಷಗಳೆ ಕಳೆಯುತ್ತ ಬಂದಿದೆ. ಜೊತೆಗೆ ಪ್ರಯಾಣಿಕರ ಕೊರತೆಯು ಇಲ್ಲ. ಈ ಕಾರಣದಿಂದ ಸ್ಥಗಿತಗೊಂಡಿರುವ ರೈಲು ಸಂಚಾರವನ್ನು ಬೆಂಗಳೂರಿನವರೆಗೂ ವಿಸ್ತರಿಸಿ ಪುನಾರಂಭಿಸಬೇಕು, ಹಾಗೆಯೇ ರೈಲು ನಿಲ್ದಾಣದ ಹೆಸರನ್ನು ಬದಲಿಸಿ ದಾಂಡೇಲಿ ರೈಲು ನಿಲ್ದಾಣ ಎಂದು ಮರು ನಾಮಕಾರಣ ಮಾಡಬೇಕೆಂದು ಕೇಂದ್ರ ಸಚಿವರಿಗೆ ಮತ್ತು ಹುಬ್ಬಳ್ಳಿ ರೇಲ್ವೆ ವಿಭಾಗದ ಆಯುಕ್ತರಿಗೆ ಸಲ್ಲಿಸಿರುವ ಮನವಿಯಲ್ಲಿ ವಿನಂತಿಸಲಾಗಿದೆ.
ಈ ಸಂದರ್ಭದಲ್ಲಿ ದಾಂಡೇಲಿ ಸಮಗ್ರ ಅಭಿವೃದ್ಧಿ ಹೋರಾಟ ಸಮಿತಿಯ ಅಧ್ಯಕ್ಷ ಅಕ್ರಂ ಖಾನ್, ಸಮಿತಿಯ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಗಡೆಪ್ಪನವರ್, ಸಮಿತಿಯ ಪದಾಧಿಕಾರಿಗಳಾದ ರಮೇಶ ಚಂದಾವರ, ಮುಜಿಬಾ ಛಬ್ಬಿ, ನೀಲಾ ಮಾದಾರ, ಜೆ.ಪಿ ಪೆರುಮಾಳ, ವಿಜಯಲಕ್ಷ್ಮಿ ಮೊದಲಾದವರು ಉಪಸ್ಥಿತರಿದ್ದರು.