ದಾಂಡೇಲಿಯಲ್ಲಿ ಯಶಸ್ವಿಯಾಗಿ ಸಂಪನ್ನಗೊಂಡ ಜಿಲ್ಲಾ ಕಸಾಪ ಆಜೀವ ಸದಸ್ಯರ ಸಭೆ ವಾರ್ಷಿಕ ಲೆಕ್ಕಪತ್ರ ಮಂಡನೆಗೆ ಮೆಚ್ಚುಗೆ

ದಾಂಡೇಲಿ: ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯರ ಸಭೆ ಮತ್ತು ವಾರ್ಷಿಕ ಲೆಕ್ಕಪತ್ರ ಮಂಡನೆಯು ದಾಂಡೇಲಿಯ ಹಳೆ ನಗರ ಸಭೆಯ ಕಟ್ಟಡದ ಆವರಣದಲ್ಲಿರುವ ಸಾಹಿತ್ಯ ಭವನದಲ್ಲಿ ಯಶಸ್ವಿಯಾಗಿ ಸಂಪನ್ನಗೊಂಡಿತು.

ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕಸಾಪ ಜಿಲ್ಲಾಧ್ಯಕ್ಷರಾದ ಬಿ.ಎನ್.ವಾಸರೆಯವರು ಸಾಹಿತ್ಯ ಪರಿಷತ್ತಿನ ಚುನಾವಣೆಯ ಸಂದರ್ಭದಲ್ಲಿ ಹೇಳಿರುವಂತೆ ಪರಿಷತ್ತಿನ ವಾರ್ಷಿಕ ಲೆಕ್ಕಪತ್ರ ಮಂಡನೆಯನ್ನು ಮಾಡಿದ್ದೇವೆ. ಸಾಹಿತ್ಯ ಪರಿಷತ್ತಿನ ಮುಂದಿನ ಕಾರ್ಯಚಟುವಟಿಕೆಗಳು ಸುಗಮವಾಗಿ ಸಾಗಬೇಕಾದರೆ ವ್ಯವಹಾರದಲ್ಲಿ ಮತ್ತು ಲೆಕ್ಕಪತ್ರದಲ್ಲಿ ಬದ್ಧತೆಯಿರಬೇಕು. ಆ ದಿಸೆಯಲ್ಲಿ 2021-22 ಮತ್ತು 2022-23ನೇ ಸಾಲಿನ ವಾರ್ಷಿಕ ಖರ್ಚು ವೆಚ್ಚಗಳ ಬಗ್ಗೆ ಲೆಕ್ಕಪರಿಶೋಧಕರ ಆಡಿಟ್ ವರದಿಯೊಂದಿಗೆ ಇಂದು ಮಂಡಿಸಲಾಗಿದೆ. ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತಿನ ಲೆಕ್ಕಪತ್ರ ವರದಿಯ ಬಗ್ಗೆ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಮೆಚ್ಚುಗೆ ವ್ಯಕ್ತಪಡಿಸಿ, ಲೆಕ್ಕಚಾರದಲ್ಲಿರುವ ಪಾರದರ್ಶಕತೆ ಮತ್ತು ಶಿಸ್ತನ್ನು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾ ನಡಾವಳಿಯಲ್ಲಿ ಶ್ಲಾಘನೆ ವ್ಯಕ್ತಪಡಿಸಿ ದಾಖಲಿಸಲಾಗಿರುವುದು ಸಂತಸದ ಸಂಗತಿ ಎಂದರು.

ವೇದಿಕೆಯಲ್ಲಿ ಕಸಾಪ ಜಿಲ್ಲಾ ಘಟಕದ ಗೌರವ ಕಾರ್ಯದರ್ಶಿ ಜಾರ್ಜ್ ಫರ್ನಾಂಡೀಸ್ ಉಪಸ್ಥಿತರಿದ್ದರು. ಲೆಕ್ಕಪತ್ರವನ್ನು ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಪಿ.ಆರ್.ನಾಯ್ಕ ಅವರು ಮಂಡಿಸಿದರು. ಜಿಲ್ಲಾ ಸಮಿತಿಯ ಪಿ.ಎಂ.ಮುಕ್ರಿಯವರು ವಾರ್ಷಿಕ ವರದಿ ವಾಚಿಸಿದರು.

ಪಿ.ಆರ್.ನಾಯ್ಕ ಅವರು ಸ್ವಾಗತಿಸಿದರು. ನಾರಾಯಣ ನಾಯ್ಕ ವಂದಿಸಿದರು. ಸಿದ್ದಪ್ಪ ಬಿರದಾರ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.