ಬಂಗೂರನಗರ ಪದವಿ ಕಾಲೇಜಿನಲ್ಲಿ ಹಳೆ ವಿದ್ಯಾರ್ಥಿಗಳ ಪುನರ್ಮಿಲನ ಕಾರ್ಯಕ್ರಮ

ದಾಂಡೇಲಿ :ನಗರದ ಬಂಗೂರ ನಗರ ಕಲಾ ವಿಜ್ನಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಕಾಲೇಜಿನಲ್ಲಿ 1993ರಲ್ಲಿ ಕಲಾ ವಿಭಾಗದಲ್ಲಿ ಕಲಿತ ಹಳೆ ವಿದ್ಯಾರ್ಥಿಗಳು ಹಳೆಯ ನೆನಪುಗಳ ಸಂಗಮ ಹೃದಯಂಗಮ ಎಂಬ ಕಾರ್ಯಕ್ರಮವನ್ನು ಅತ್ಯಂತ ಅರ್ಥಪೂರ್ಣವಾಗಿ ಹಮ್ಮಿಕೊಂಡಿದ್ದರು.

ಕಳೆದ 30 ವರ್ಷಗಳ ಸವಿನೆನಪಿಗಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾಲೇಜು ದಿನಗಳನ್ನು ಕಾರ್ಯಕ್ರಮದಲ್ಲಿ ಮೆಲುಕು ಹಾಕಲಾಯಿತು. ವಿದ್ಯಾರ್ಥಿ ಜೀವನದಲ್ಲಿ ನಡೆದ ಸುಂದರ ಕ್ಷಣಗಳು, ತುಂಟಾಟ ಇವೆಲ್ಲವುಗಳನ್ನು ಹಳೆ ವಿದ್ಯಾರ್ಥಿಗಳು ಮನಬಿಚ್ಚಿ ಸ್ಮರಿಸಿಕೊಂಡರಲ್ಲದೇ ಕಾಲೇಜಿನ ಗುರುವೃಂದದವರು ನೀಡಿದ ಮಾರ್ಗದರ್ಶನವೇ ನಮ್ಮ ಜೀವನದ ಯಶಸ್ವಿಗೆ ಶ್ರೀರಕ್ಷೆ ಎಂದು ಗುರುವೃಂದದವರಿಗೆ ಗೌರವಪೂರ್ವಕವಾಗಿ ಸನ್ಮಾನಿಸಿದರು.

ಹಳೆ ವಿದ್ಯಾರ್ಥಿಗಳಿಗೆ ತಾವು ಕಲಿತ ಕಾಲೇಜಿನ ಬಗ್ಗೆ ಇರುವ ಗೌರವ, ಅಭಿಮಾನಕ್ಕೆ ಕಾಲೇಜಿನ ಪ್ರಾಚಾರ್ಯರಾದ ಡಾ.ಬಿ.ಎಲ್.ಗುಂಡೂರ ಅವರು ಮೆಚ್ಚುಗೆಯನ್ನು ವ್ಯಕ್ತಪಡಿಸಿ ಕೃತಜ್ಞತೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ನಿವೃತ್ತ ಹಾಗೂ ಹಾಲಿ ಪ್ರಾಧ್ಯಾಪಕರು, ಉಪನ್ಯಾಸಕರು, ಬೋಧಕೇತರ ಸಿಬ್ಬಂದಿಗಳು ಮತ್ತು ಹಳೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು