ಸಿಐಟಿಯು ಹಿರಿಯ ಮುಖಂಡ ದಿ: ಆರ್.ಎಂ. ಮುಲ್ಲಾ ಅವರಿಗೆ ಹಳಿಯಾಳದಲ್ಲಿ ನುಡಿನಮನ

ಹಳಿಯಾಳ : ಇತ್ತೀಚಿಗೆ ವಿಧಿವಶರಾದ ಜಿಲ್ಲೆಯ ಸಿಐಟಿಯು ಹಿರಿಯ ಮುಖಂಡರಾದ ಹಳಿಯಾಳ ತಾಲ್ಲೂಕಿನ ಹವಗಿ ಗ್ರಾಮದ ನಿವಾಸಿ ಆರ್.ಎಂ.ಮುಲ್ಲಾ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಕಾರ್ಯಕ್ರಮವನ್ನು ಇಂದು ಹಳಿಯಾಳ ಪಟ್ಟಣದ ಮಕ್ಕಳ ಉದ್ಯಾನವನದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದ ಆರಂಭದಲ್ಲಿ ಆರ್.ಎಂ. ಮುಲ್ಲಾ ಅವರ ಭಾವಚಿತ್ರಕ್ಕೆ ಪುಷ್ಪ ಗೌರವವನ್ನು ಸಲ್ಲಿಸಿದ ಬಳಿಕ ಮೃತರ ಆತ್ಮಕ್ಕೆ ಶಾಂತಿಕೋರಿ ಮೌನ ಪ್ರಾರ್ಥನೆಯನ್ನು ಸಲ್ಲಿಸಲಾಯಿತು.

ಶ್ರದ್ಧಾಂಜಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಮುಖಂಡರಾದ ಶಾಂತರಾಮ ನಾಯಕ ಅವರು ಆರ್. ಎಂ. ಮುಲ್ಲಾ ರವರು, ಭಾರತ ಕಮ್ಯುನಿಸ್ಟ್ ಪಕ್ಷ ಮತ್ತು ಕಾರ್ಮಿಕ ಸಂಘಟನೆ ಸಿ ಐ ಟಿ ಯುನ ಅಡಿಯಲ್ಲಿ ಕ್ಷೇತ್ರದ ಎಲ್ಲಾ ಅಸಂಘಟಿತ ಕಾರ್ಮಿಕರು ಅದರಲ್ಲೂ ವಿಶೇಷವಾಗಿ ಪಂಚಾಯತ ನೌಕರರು ಮತ್ತು ಬಿಸಿಯೂಟ ಕಾರ್ಯಕರ್ತರ ಸೌಲತ್ತುಗಳನ್ನು ಉತ್ತಮಪಡಿಸುವ ನಿಟ್ಟಿನಲ್ಲಿ ನಿರಂತರವಾಗಿ ಶ್ರಮಿಸುತ್ತಾ ಬಂದಿದ್ದರು. ಯಾವುದೇ ಕಾರ್ಮಿಕರಿಗೆ ಅನ್ಯಾಯವಾದಲ್ಲಿ ಮುಂಚೂಣಿಯಲ್ಲಿ ನಿಂತು ಹೋರಾಟಗಳನ್ನು ಮಾಡುತ್ತಿದ್ದರು. ರೈತರ ಹೋರಾಟಗಳಲ್ಲಿ ಸದಾ ಸಕ್ರಿಯರಾಗಿ ತೊಡಗಿಸಿಕೊಂಡಿದ್ದರು ಎಂದು ಆರ್.ಎಂ.ಮುಲ್ಲಾ ಅವರ ಹೋರಾಟದ ಬದುಕಿನ ಬಗ್ಗೆ ಮಾತನಾಡಿದರು.

ಸಿಐಟಿಯು ನ ದಾಂಡೇಲಿಯ ಸಂಚಾಲಕರಾದ ಸಲೀಮ್ ಸಯ್ಯದ್ ಅವರು ಮಾತನಾಡಿ ಕಮ್ಯುನಿಸ್ಟ್ ಸಿದ್ದಾಂತಗಳನ್ನು ತಮ್ಮೊಳಗೆ ಅಳವಡಿಸಿಕೊಂಡು ಅನ್ಯಾಯದ ವಿರುದ್ಧ ರಾಜಿ ಮಾಡಿಕೊಳ್ಳದೇ ಪ್ರಾಮಾಣಿಕವಾಗಿ ಹೋರಾಟಗಳಲ್ಲಿ ಪಾಲ್ಗೊಳ್ಳಬೇಕೆಂದು ಯುವಕರಿಗೆ ಮಾರ್ಗರ್ಶನ ಮಾಡುತ್ತಿದ್ದ ಅವರ ಸಾಮಾಜಿಕ ಗುಣವಂತಿಕೆ ಸದಾ ಸ್ಮರಣೀಯ ಎಂದರು.

ಸಿಐಟಿಯು ನ ಹಳಿಯಾಳ ಸಂಚಾಲಕರಾದ ಜಯಶ್ರೀ ಹಿರೇಕರ್ ಅವರು ಮಾತನಾಡಿ ಅಂಗನವಾಡಿ ಹಾಗೂ ಬಿಸಿಯೂಟ ಕಾರ್ಯಕರ್ತರ ಯಾವುದೇ ಹೋರಾಟಗಳಲ್ಲಿ ಮುಂಚೂಣಿಯಲ್ಲಿ ನಿಂತು ಮಾರ್ಗದರ್ಶನ ಮಾಡುತ್ತಿದ್ದ ಆರ್.ಎಂ.ಮುಲ್ಲಾ ಅವರು ಹೋರಾಟಕ್ಕೆ ಶಕ್ತಿಯಾಗಿದ್ದರು ಎಂದರು.

ಸಭೆಯಲ್ಲಿ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಹಾಗೂ ಆರ್.ಎಂ.ಮುಲ್ಲಾ ಅವರ ಅಭಿಮಾನಿಗಳು ಭಾಗವಹಿಸಿದ್ದರು.