ಅಂಕೋಲಾ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಮಾದರಿ ಕಾರ್ಯ : ನಾಗರಾಜ ನಾಯಕ


ಅಂಕೋಲಾ : ಪಟ್ಟಣದ ಸರ್ಕಾರಿ ಪ್ರೌಢಶಾಲೆ ಮತ್ತು ಪ್ರಾಥಮಿಕ ಶಾಲೆಯ ಆವರಣದಲ್ಲಿ ಅಂಕೋಲಾ ತಾಲೂಕು ಪ್ರಾಥಮಿಕ ಶಿಕ್ಷಕರ ಸಂಘದ ವತಿಯಿಂದ ನಿವೃತ್ತ ಶಿಕ್ಷಕರಿಗೆ ವಿಶೇಷವಾಗಿ ಸನ್ಮಾನಿಸಿ ಗೌರವಿಸಲಾಯಿತು.
ನಿವೃತ್ತ ಶಿಕ್ಷಕರನ್ನು ಸನ್ಮಾನ ಸನ್ಮಾನಿಸಿ ಮಾತನಾಡಿದ ಬೆಳಗಾವಿ ಸರ್ಕಾರಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದ ವಿಶ್ರಾಂತ ಪ್ರಾಚಾರ್ಯ ನಾಗರಾಜ ಬಿ. ನಾಯಕ, ವಯೋ ನಿವೃತ್ತ ಶಿಕ್ಷಕರನ್ನು ಸನ್ಮಾನಿಸುವುದು ಒಂದು ಚಂದದ ಹಾಗೂ ಹಿರಿಮೆ ಹೊಂದಿರುವ ಕಾರ್ಯಕ್ರಮ. ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಂತಸವನ್ನು ತಂದಿದೆ. ಈ ಕಾರ್ಯಕ್ರಮ ನಿರಂತರವಾಗಿ ಮುಂದುವರೆಯಲಿ. ಅಂಕೋಲಾ ಶಿಕ್ಷಕರೊಂದಿಗಿನ ಒಡನಾಟ ಅತ್ಯುತ್ತಮವಾಗಿತ್ತು ಎಂದರು.
ಅಧ್ಯಕ್ಷತೆ ವಹಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಮಂಗಳಲಕ್ಷ್ಮಿ ಪಾಟೀಲ ಮಾತನಾಡಿ, ಹಲವಾರು ವರ್ಷಗಳ ಕಾಲ ನಿರಂತರವಾಗಿ ಜ್ಞಾನಸುಧೆಯನ್ನು ವಿದ್ಯಾರ್ಥಿಗೆ ಉಣಬಡಿಸಿದ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಿ ಗೌರವಿಸಿ ಸಂಘ ಬೀಳ್ಕೊಡುವುದು ಅಭಿನಂದನಾರ್ಹವಾದುದು. ಇಲಾಖೆಯ ಕಾರ್ಯಭಾರ ಮತ್ತು ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿ ಎರಡನ್ನು ಶಿಕ್ಷಕರು ಸಮಾನವಾಗಿ ನಿರ್ವಹಿಸುವ ಮೂಲಕ ಸಮಾಜದ ಪ್ರಶಂಸೆಗೆ ಪಾತ್ರರು ಎಂದರು.
ಕ್ಷೇತ್ರ ಸಮನ್ವಯಾಧಿಕಾರಿ ಹರ್ಷಿತಾ ನಾಯಕ ಮಾತನಾಡಿ, ನಿವೃತ್ತಿ ಹೊಂದಿರುವ ಶಿಕ್ಷಕರು ಪ್ರವೃತ್ತಿಯಲ್ಲಿ ನಿರಂತರವಾಗಿ ಮುಂದುವರೆಯಬೇಕು. ಜೀವನೋತ್ಸಾಹವನ್ನು ಸದಾ ಕಾಪಾಡಿಕೊಳ್ಳಬೇಕು ಎಂದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ತಾಲೂಕು ಘಟಕದ ಅಧ್ಯಕ್ಷ ಜಗದೀಶ ಜಿ. ನಾಯಕ ಹೊಸ್ಕೇರಿ ಪ್ರಾಸ್ತಾವಿಕವಾಗಿ ಮಾತನಾಡಿ, ವಯೋ ನಿವೃತ್ತ ಶಿಕ್ಷಕರನ್ನು ಸಂಘ ಸನ್ಮಾನಿಸಿ ಗೌರವಿಸಿ ಬೀಳ್ಕೊಡಲು ಹೆಮ್ಮೆಪಡುತ್ತದೆ. ಇದು ಸಂಘದ ಆದ್ಯ ಕರ್ತವ್ಯವೂ ಆಗಿದೆ ಎಂದರು.
ವಯೋ ನಿವೃತ್ತಿ ಹೊಂದಿದ ಪುರಲಕ್ಕಿಬೇಣ ಸ.ಹಿ.ಪ್ರಾ. ಶಾಲೆಯ ಶಿಕ್ಷಕ ರಫಿಕ್ ಶೇಖ್, ಸ.ಕಿ.ಪ್ರಾ. ಶಾಲೆ ವಂದಿಗೆ ಶಾಲೆಯ ಶಿಕ್ಷಕಿ ರಜನಿ ಎನ್. ನಾಯ್ಕ, ಸ.ಕಿ.ಪ್ರಾ. ಶಾಲೆಯ ಮಾಣಿಗದ್ದೆ ಶಿಕ್ಷಕ ವಿಜಯ ಎನ್. ನಾಯಕ, ಸ.ಕಿ.ಪ್ರಾ. ಶಾಲೆ ಮರಕಾಲ ಶಿಕ್ಷಕ ರಮಾನಂದ ಟಿ. ನಾಯಕ, ಸ.ಹಿ.ಪ್ರಾ. ಶಾಲೆ ಹಿಲ್ಲೂರ ಶಿಕ್ಷಕಿ ನಾಗರತ್ನ ಎಸ್. ನಾಯಕ, ಸ.ಹಿ.ಪ್ರಾ. ಶಾಲೆ ತಳಗದ್ದೆ ಶಿಕ್ಷಕಿ ಕವಿತಾ ಎನ್. ಶೆಟ್ಟಿ, ಕೆ.ಪಿ.ಎಸ್. ಅಗಸೂರ ಶಿಕ್ಷಕಿ ಸುಶೀಲಾ ಎಂ. ಶೆಟ್ಟಿ ಇವರನ್ನು ಸನ್ಮಾನಿಸಿ ಗೌರವಿಸಿ ಬೀಳ್ಕೊಡಲಾಯಿತು.
ಸಮೂಹ ಸಂಪನ್ಮೂಲ ವ್ಯಕ್ತಿಗಳಾಗಿ ತಾಲ್ಲೂಕಿನಲ್ಲಿ ಉತ್ತಮವಾಗಿ ಸೇವೆ ಸಲ್ಲಿಸಿ ವರ್ಗಾವಣೆಗೊಂಡಿರುವ ಕೆ.ಎಂ. ಗೌಡ ಹಾಗೂ ರೇಷ್ಮಾ ನಾಯ್ಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಸಂಘದ ಉಪಾಧ್ಯಕ್ಷೆ ಭಾರತಿ ಬಿ. ನಾಯಕ, ಸದಸ್ಯರಾದ ಮಂಜುನಾಥ ಬಿ. ನಾಯಕ, ಶೇಖರ ಗಾಂವಕರ, ಲಕ್ಷ್ಮೀ ನಾಯಕ, ಸವಿತಾ ನಾಯಕ, ತುಕಾರಾಮ ಬಂಟ, ಸಂಜೀವ ಆರ್. ನಾಯಕ, ಶೋಭಾ ನಾಯಕ, ಆನಂದು ನಾಯ್ಕ, ದಿವಾಕರ ದೇವನಮನೆ, ವೆಂಕಮ್ಮ ನಾಯಕ, ವಿ.ಪಿ. ನಾಯ್ಕ, ವೇಲಾಯುಧ ನಾಯರ, ನಾರಾಯಣ ಆರ್. ನಾಯಕ, ಸನ್ಮಾನಿತರ ಕುಟುಂಬಸ್ಥರು ಉಪಸ್ಥಿತರಿದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ರಾಜು ಎಚ್. ನಾಯಕ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಉಪಾಧ್ಯಕ್ಷ ಮಂಜುನಾಥ ವೆಂಕಟರಮಣ ನಾಯಕ ವಂದಿಸಿದರು.