ಗದಗ ಹಣಕಾಸಿನ ವಿಚಾರವಾಗಿ ನಡೆದ ಎರಡು ಕುಟುಂಬಗಳ ನಡುವಿನ ಕಲಹ ವಿಕೋಪಕ್ಕೆ ತಿರುಗಿ ಮಾರಕಾಸ್ತ್ರಗಳಿಂದ ಹೊಡೆದಾಡಿಕೊಂಡ ಘಟನೆ ನಿನ್ನೆ ರಾತ್ರಿ ನಡೆದಿದೆ. ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದಲ್ಲಿ ನಿನ್ನೆ ರಾತ್ರಿ ಮೈನುದ್ದೀನ ತಹಶೀಲ್ದಾರ ಹಾಗೂ ಸಬೀಲ ಬಂಕಾಪೂರ ನಡುವೆ ಹಣಕಾಸಿನ ವಿಚಾರವಾಗಿ ಮಾತಿನ ಚಕಮಕಿ ನಡೆದು ವಿಕೋಪಕ್ಕೆ ಹೋಗಿ ಹೊಡೆದಾಡಿಕೊಂಡಿದ್ದಾರೆ.ಮೈನುದ್ದೀನ ತಹಶೀಲ್ದಾರ ಹಾಗೂ ಸಬೀಲ ಬಂಕಾಪೂರ ನಡುವೆ ಲಕ್ಷ್ಮೇಶ್ವರದ ಬಸ್ ನಿಲ್ದಾಣ ಬಳಿ ವ್ಯವಹಾರ ನಡೆದಿತ್ತು. ಮೈನುದ್ದೀನ ಸಬೀಲನಿಗೆ ಕೊಟ್ಟ ದುಡ್ಡುನ್ನು ಮರಳಿ ಕೇಳಿದಾಗ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಹೊಡೆದಾಡಿಕೊಂಡಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ. ಇದಾದ ಬಳಿಕ ಹಲ್ಲೆಗೊಳಗಾದ ಮೈನುದ್ದೀನ ಲಕ್ಷ್ಮೇಶ್ವರದ ಸರಕಾರಿ ಆಸ್ಪತ್ರೆಗೆ ಹೋದಾಗ ಸಬೀಲ ಬಂಕಾಪೂರನ ಸಂಬಂಧಿಕರಾದ ನೌಶಾದ್ ಮೈನುದ್ದೀನ ಆಡೂರ, ಅಬ್ದುಲ್ ಅಲಿಯಾಸ್ ಅಬ್ದುಲ್ ರಜಾಕ್ ಮೈನುದ್ದೀನ ಆಡೂರು, ಇಸ್ಮಾಯಿಲ್ ಆಡೂರ, ಅತ್ತಾರ ಅಲಿಯಾಸ್ ಅಬ್ದುಲ್ ಸತ್ತಾರ ಆಡೂರ, ಸುಲೇಮಾನ್ ಆಡೂರ ಸೇರಿದಂತೆ ಇನ್ನೂ ಅನೇಕರು ಆಸ್ಪತ್ರೆ ಬಳಿ ಮತ್ತೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ. ಕೈಯಲ್ಲಿ ರಾಡ್, ಚಾಕು ಹಾಗೂ ಬಡಿಗೆಗಳಿಂದ ಮೈನುದ್ದೀನ ಹಾಗೂ ಆತನ ಸಹೋದರರಾದ ಇರ್ಫಾನ್, ಶಾಬುದ್ದೀನ ಮೇಲೆ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ್ದಾರೆ ಎಂದು ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, 0109/2023 ಕಲಂ 143,147,148, 323,307, 504, ರೆ.ವಿ 149 IPC ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರತಿದೂರು ದಾಖಲು
ಹಳೆಯ ದ್ವೇಷ ಸಾಧಿಸುತ್ತಾ ಬಂದಿರುವ ಶಾಬುದ್ದೀನ ತಂದೆ ಮಲಿಕಸಾಬ ತಹಶೀಲ್ದಾರ, ಮೈನುದ್ದೀನ ತಹಶೀಲ್ದಾರ, ಇರ್ಫಾನ್ ತಹಶೀಲ್ದಾರ, ಬರಕತ್ ಅಲಿ ಡೋಂಗರಿ ಮುಳಗುಂದ, ಮಕ್ಬೂಲಸಾಬ ಮುಳಗುಂದ ಹಾಗೂ ಇತರರು ಸೇರಿ ನಮ್ಮ ಜೊತೆಗೆ ಆಗಾಗ ತಂಟೆ ತಕರಾರು ದ್ವೇಷ ಇಟ್ಟುಕೊಂಡು ಶುಕ್ರವಾರ ರಾತ್ರಿ ಲಕ್ಷ್ಮೇಶ್ವರದ ಸರಕಾರಿ ಆಸ್ಪತ್ರೆ ಎದುರಿಗೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ, ಕೊಲೆಗೆ ಯತ್ನಿಸಿದ್ದಾರೆ ಎಂದು ನೌಶಾದ್ ತಂದೆ ಮೈನುದ್ದೀನ ಆಡೂರ ಎಂಬುವರು ದೂರು ನೀಡಿದ್ದು, 0110/2023, ಕಲಂ 143, 147,148,323,324, 307, 504, ರೆ.ವಿ 149 IPC ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆಯಲ್ಲಿ ಗಾಯಗೊಂಡವರು ಲಕ್ಷ್ಮೇಶ್ವರ ಸರಕಾರಿ ಆಸ್ಪತ್ರೆಗೆ ದಾಖಲಾದರೆ, ಇನ್ನುಳಿದ ಕೆಲವರು ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ.