ಆ್ಯಂಡಿಯ ಯಶಸ್ಸಿನ ಯಶೋಗಾಥೆ: ಈ ಸಲ ಕಪ್..?

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನೂತನ ಕೋಚ್ ಆಗಿ ಝಿಂಬಾಬ್ವೆಯ ಆ್ಯಂಡಿ ಫ್ಲವರ್ ಆಯ್ಕೆಯಾಗಿದ್ದಾರೆ. ಇದರೊಂದಿಗೆ ಮುಂದಿನ ಸೀಸನ್ ಐಪಿಎಲ್​ನಲ್ಲಿ ಆರ್​ಸಿಬಿ ಹೊಸ ತಂತ್ರಗಳೊಂದಿಗೆ ಕಣಕ್ಕಿಳಿಯಲಿದೆ. ಅದು ಕೂಡ ಎದುರಾಳಿಗಳ ತಂತ್ರಗಳಿಗೆ ಅತ್ಯುತ್ತಮ ಪ್ರತಿತಂತ್ರ ರೂಪಿಸಿಕೊಳ್ಳುವ ಮೂಲಕ ಎಂಬುದು ಇಲ್ಲಿ ಉಲ್ಲೇಖಾರ್ಯ. ಏಕೆಂದರೆ ಆರ್​ಸಿಬಿ ತಂಡ ಕೋಚ್ ಆ್ಯಂಡಿ ಫ್ಲವರ್ ಇಂತಹದೊಂದು ತಂತ್ರಗಾರಿಕೆಯಲ್ಲಿ ನಿಪುಣರು. ಇದಕ್ಕೆ ಸಾಕ್ಷಿಯೇ ಇದುವರೆಗಿನ ಅವರ ಕೋಚಿಂಗ್ ಅಂಕಿ ಅಂಶಗಳು.

  • ಝಿಂಬಾಬ್ವೆ ತಂಡ ಮಾಜಿ ಆಟಗಾರ ಮೊದಲ ಬಾರಿಗೆ ಕೋಚಿಂಗ್ ಸ್ಥಾನ ಅಲಂಕರಿಸಿದ್ದು ಇಂಗ್ಲೆಂಡ್​ ತಂಡಕ್ಕೆ ಎಂಬುದು ವಿಶೇಷ. 2007 ರಲ್ಲಿ ಇಂಗ್ಲೆಂಡ್ ತಂಡದ ಸಹಾಯಕ ಕೋಚ್ ಆಗಿ ಆ್ಯಂಡಿ ಫ್ಲವರ್ ಹೊಸ ಇನಿಂಗ್ಸ್ ಆರಂಭಿಸಿದ್ದರು. ಈ ಇನಿಂಗ್ಸ್ ಆರಂಭದೊಂದಿಗೆ ಇಂಗ್ಲೆಂಡ್ ಪಾಲಿಗೆ ಮರೀಚಿಕೆಯಾಗಿದ್ದ ವಿಶ್ವಕಪ್ ಅನ್ನು ತಂದುಕೊಟ್ಟಿದ್ದರು.
  • 2010 ರಲ್ಲಿ ಇಂಗ್ಲೆಂಡ್ ತಂಡವು ತನ್ನ ಮೊದಲ ಐಸಿಸಿ ವಿಶ್ವಕಪ್ ಗೆದ್ದಿತ್ತು. ಈ ವಿಶ್ವಕಪ್ ಗೆಲುವಿನ ಹಿಂದಿದ್ದ ಮಾಸ್ಟರ್ ಮೈಂಡ್ ಆ್ಯಂಡಿ ಫ್ಲವರ್. ಇನ್ನು ಆ್ಯಂಡಿ ಫ್ಲವರ್​ ಅವರ ಮಾರ್ಗದರ್ಶನದಲ್ಲೇ ಇಂಗ್ಲೆಂಡ್ ತಂಡವು ಟೆಸ್ಟ್ ಕ್ರಿಕೆಟ್​ನಲ್ಲಿ ನಂಬರ್ 1 ಸ್ಥಾನ ಅಲಂಕರಿಸಿತ್ತು.
  • ಅಷ್ಟೇ ಅಲ್ಲದೆ 2009, 2011, 2013 ರಲ್ಲಿ ಇಂಗ್ಲೆಂಡ್ ಆ್ಯಶಸ್​ನಲ್ಲಿ ಇಂಗ್ಲೆಂಡ್ ತಂಡವು ಹ್ಯಾಟ್ರಿಕ್ ಸರಣಿ ಗೆದ್ದು ಇತಿಹಾಸ ನಿರ್ಮಿಸಿತ್ತು. ಅಂದು ಇಂಗ್ಲೆಂಡ್ ತಂಡ ಕೋಚ್ ಆಗಿದ್ದವರು ಆ್ಯಂಡಿ ಫ್ಲವರ್​. ಆ ಬಳಿಕ ಇಂಗ್ಲೆಂಡ್ ತಂಡ ನಿರ್ದೇಶಕರಾಗಿಯೂ ಕಾರ್ಯ ನಿರ್ವಹಿಸಿದ್ದರು. ಇದರ ನಡುವೆ BBC ಯ ವರ್ಷದ ಕೋಚ್ ಪ್ರಶಸ್ತಿಯನ್ನು ಸಹ ಪಡೆದಿದ್ದರು.
  • 2020 ರಲ್ಲಿ ಕೆರಿಬಿಯನ್ ಪ್ರೀಮಿಯರ್ ಲೀಗ್​ನಲ್ಲಿ ಸೇಂಟ್ ಲೂಸಿಯಾ ಕಿಂಗ್ಸ್ (ಹಿಂದೆ ಸೇಂಟ್ ಲೂಸಿಯಾ ಝೌಕ್ಸ್) ತಂಡ ಮುಖ್ಯ ತರಬೇತುದಾರರಾಗಿ ನೇಮಕಗೊಂಡರು. ಇವರ ಮಾರ್ಗದರ್ಶನದಲ್ಲಿ ಸೇಂಟ್ ಲೂಸಿಯಾ ಕಿಂಗ್ಸ್ ಎರಡು ಬಾರಿ ಫೈನಲ್ ಆಡಿತ್ತು.
  • 2021 ರಲ್ಲಿ ಪಾಕಿಸ್ತಾನ್ ಸೂಪರ್ ಲೀಗ್ ನಲ್ಲಿ ಮುಲ್ತಾನ್ ಸುಲ್ತಾನ್‌ಗೆ ಮುಖ್ಯ ತರಬೇತುದಾರರಾಗಿ ಕಾಣಿಸಿಕೊಂಡಿದ್ದರು. ಅದೇ ವರ್ಷ ಮುಲ್ತಾನ್ ಸುಲ್ತಾನ್ ತಂಡವು ಚಾಂಪಿಯನ್ ಪಟ್ಟಕ್ಕೇರಿತ್ತು.
  • ಇನ್ನು 2022 ರಲ್ಲಿ ದಿ ಹ್ರಂಡೆಡ್ ಲೀಗ್​ನಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದ ಟ್ರೆಂಟ್ ರಾಕೆಟ್ಸ್ ತಂಡದ ಕೋಚ್ ಕೂಡ ಆ್ಯಂಡಿ ಫ್ಲವರ್.
  • ಹಾಗೆಯೇ 2023 ರಲ್ಲಿ ಇಂಟರ್​ನ್ಯಾಷನಲ್ ಲೀಗ್ ಟಿ20 ಕ್ರಿಕೆಟ್​ ಟೂರ್ನಿಯಲ್ಲಿ ಗಲ್ಫ್ ಜೈಂಟ್ಸ್ ಟೀಮ್​ಗೆ ಯಶಸ್ವಿ ಮಾರ್ಗದರ್ಶನ ನೀಡಿದ್ದ ಆ್ಯಂಡಿ ಫ್ಲವರ್​, ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದರು.
  • 2023 ರಲ್ಲಿ ಪಾಕಿಸ್ತಾನ್ ಸೂಪರ್ ಲೀಗ್​ನಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದ ಮುಲ್ತಾನ್ ಸುಲ್ತಾನ್ ತಂಡ ಕೋಚ್ ಕೂಡ ಆ್ಯಂಡಿ ಫ್ಲವರ್ ಎಂಬುದು ವಿಶೇಷ.
  • ಹಾಗೆಯೇ ಐಪಿಎಲ್ 2022 ರಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಮುಖ್ಯ ಕೋಚ್ ಆಗಿ ನೇಮಕವಾಗಿದ್ದ ಆ್ಯಂಡಿ ಫ್ಲವರ್ ಸತತ 2 ಸೀಸನ್​ಗಳಲ್ಲೂ ಹೊಸ ತಂಡವನ್ನು ಪ್ಲೇಆಫ್​ಗೆ ತಲುಪಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.ಅಂದರೆ ಆ್ಯಂಡಿ ಫ್ಲವರ್ ತರಬೇತಿ ನೀಡಿದ ಬಹುತೇಕ ತಂಡಗಳೆಲ್ಲವೂ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಇದೀಗ ಫ್ಲವರ್ ಆರ್​ಸಿಬಿಯೊಂದಿಗೆ ಅರಳಿದೆ. ಅದರಂತೆ ಈ ಸಲ ಕಪ್ ಯಾರದ್ದು ಎಂಬುದು ನಿಮ್ಮ ಊಹೆಗೆ ಬಿಟ್ಟಿದ್ದು.