ಯೋಧನಿಗೆ ಅಂತಿಮ ನಮನ ಸಲ್ಲಿಸಿದ ಸಿದ್ದಾಪುರ ಜನತೆ

ಸಿದ್ದಾಪುರ: ಅನಾರೋಗ್ಯದಿಂದ ನಿಧನರಾದ ಭಾರತೀಯ ಸೈನ್ಯದ ವೀರ ಯೋಧ ಗಿರೀಶ ನಾಯ್ಕ ಅವರ ಅಂತ್ಯ ಸಂಸ್ಕಾರವನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಯಿತು.
ಪುಣೆಯ ಮಿಲಿಟರಿ ಆಸ್ಪತ್ರೆಯಿಂದ ಹುಟ್ಟೂರಾದ ಸಿದ್ದಾಪುರ ತಾಲೂಕಿನ ಮನಮನೆಗೆ ಗಿರೀಶ ಅವರ ಪಾರ್ಥಿವ ಶರೀರವನ್ನು ಬುಧವಾರ ರಾತ್ರಿ ತರಲಾಗಿದ್ದು, ಸಕಲ ಸರ್ಕಾರಿ ಗೌರವದೊಂದಿಗೆ ಅಂತಿಮ ನಮನ ಸಲ್ಲಿಸಲಾಯಿತು. ತಾಲೂಕಾ ಆಡಳಿತದ ವತಿಯಿಂದ ಭಾರತಾಂಬೆಯ ಹೆಮ್ಮೆಯ ಪುತ್ರನಿಗೆ ಅಂತಿಮ ನಮನ ಸಲ್ಲಿಸಲಾಯಿತು. ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಪಾರ್ಥಿವ ಶರೀರಕ್ಕೆ ಗೌರವ ಸಲ್ಲಿಸಿ ಅಂತಿಮ ವಿಧಿ-ವಿಧಾನ ನೆರವೇರಿಸಲಾಯಿತು.

‘ ಅಂತಿಮ ದರ್ಶನ ಪಡೆದ ಭೀಮಣ್ಣ ‘
ಪುಣೆಯಿಂದ ಪಾರ್ಥಿವ ಶರೀರವನ್ನು ಮನಮನೆಗೆ ತರುತ್ತಿದ್ದಂತೆ ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ಸ್ಥಳಕ್ಕೆ ಆಗಮಿಸಿ ಗಿರೀಶ ನಾಯ್ಕ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು ಗೌರವ ನಮನ‌ ಸಲ್ಲಿಸಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಜತೆಗೆ ತಾಲೂಕಾ ದಂಡಾಧಿಕಾರಿ ಎಂ.ಆರ್.ಕುಲಕರ್ಣಿ, ತಾಲೂಕಾ‌ ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ದೇವರಾಜ ಹಿತಲಕೊಪ್ಪ, ತಾಲೂಕಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕ, ಮಾಜಿ ಅಧ್ಯಕ್ಷ ಕೆ.ಜಿ.ನಾಗರಾಜ ಸೇರಿದಂತೆ ಸಾವಿರಾರು ಜನ ಗಿರೀಶ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು ಗೌರವ ಸಲ್ಲಿಸಿದರು.