ಸಿನಿಮೀಯ ರೀತಿಯಲ್ಲಿ ಮೊಬೈಲ್ ಎಗರಿಸಿದ ಕಳ್ಳರು; ಅಂಕೋಲಾ ಬಸ್ ನಿಲ್ದಾಣದಲ್ಲಿ ಮತ್ತೆ ಕಳ್ಳರ ಹಾವಳಿ

ಅಂಕೋಲಾ: ಬಸ್ ಏರಲು ನಿಂತಿದ್ದ ಇಬ್ಬರ ಬ್ಯಾಗ್ ನಿಂದ ಮೊಬೈಲ್ ಕಳ್ಳತನ ಮಾಡಿದ ಘಟನೆ ಬುಧವಾರ ಸಂಜೆ ಪಟ್ಟಣದ ಮುಖ್ಯ ಬಸ್ ನಿಲ್ದಾಣದಲ್ಲಿ ನಡೆದಿದೆ.


ತಾಲ್ಲೂಕಿನಿಂದ ದುಗ್ಗನಮನೆಗೆ ಹೋಗುವ ಬಸ್ ಹತ್ತುವ ವೇಳೆ ಈ ಘಟನೆ ನಡೆದಿದೆ. ಯುವತಿಯೋರ್ವಳು ಮೊಬೈಲ್ ನಲ್ಲಿ ಮಾತಾಡಿ ಬ್ಯಾಗ್ ನಲ್ಲಿ ಮೊಬೈಲ್ ಇಟ್ಟಿದ್ದಳು. ಬಸ್ ಏರುತ್ತಿದ್ದಂತೆ ಮೊಬೈಲ್ ಕಾಣೆಯಾದ ಕುರಿತು ತಿಳಿದಿದೆ. ಇದೇ ಬಸ್ ಏರಲು ವೃದ್ದರೊಬ್ಬರು ನಿಂತಿದ್ದರು ಅವರ ಬ್ಯಾಗ್ ಅನ್ನು ಕತ್ತರಿಸಿ ಮೊಬೈಲ್ ಎಗರಿಸಲಾಗಿದೆ. ಈ ಕೃತ್ಯವನ್ನು ನೋಡಿದರೆ ಇದು ಪರಿಣಿತರ ಕಳ್ಳರ ಕೈ ಚಳಕ ಎನ್ನುವುದು ಗೊತ್ತಾಗುತ್ತದೆ. ಇದೇ ವೇಳೆ ಮತ್ತೊಬ್ಬರ ಪರ್ಸ್ ಕೂಡ ಕಳ್ಳತನವಾಗಿದೆ. ಪೊಲೀಸರು ಸ್ಥಳಕ್ಕೆ ಬಂದು ಪರೀಶೀಲನೆ ನಡೆಸಿದರು.

ಸಮಯಕ್ಕೆ ಉಪಯೋಗಕ್ಕೆ ಬಾರದ ಧ್ವನಿ ವರ್ಧಕ

ಸಿನಿಮೀಯ ರೀತಿಯಲ್ಲಿ ಕಳ್ಳತನ ನಡೆದಿದ್ದು ಬಸ್ ನಲ್ಲಿ 80 ಕ್ಕಿಂತ ಹೆಚ್ಚು ಪ್ರಯಾಣಿಕರಿದ್ದು ಅವರಿಗೆ 15 ನಿಮಿಷವಾದರೂ ಈ ದುಷ್ಕೃತ್ಯದ ಬಗ್ಗೆ ತಿಳಿದೇ ಇಲ್ಲ. ಸರಣಿ ಕಳ್ಳತನದ ಬಗ್ಗೆ ಆತಂಕ ಎದುರಾಗಿ ಪ್ರಯಾಣಿಕರು ಧ್ವನಿವರ್ಧಕ ಮೂಲಕ ಜಾಗೃತಿ ಮೂಡಿಸಿ ಎಂದು ಕೆಎಸ್ಆರ್ಟಿಸಿ ಅಧಿಕಾರಿಗಳನ್ನು ಕೇಳಿದ್ದಾರೆ. ಇದು ಸ್ವಯಂ ಚಾಲಿತ ಧ್ವನಿವರ್ಧಕ ಹೊರತು ನಮಗೆ ಯಾವುದೇ ಘೋಷಣೆಗಳನ್ನು ಮಾಡಲು ಸಾಧ್ಯವಾಗುವುದಿಲ್ಲ ಎಂದು ಅಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ. ಸಮಯಕ್ಕೆ ಉಪಯೋಗಕ್ಕೆ ಬಾರದ ಧ್ವನಿವರ್ಧಕಗಳನ್ನು ಕೇವಲ ಜಾಹೀರಾತಿಗಾಗಿ ಬಳಸುವುದು ಎಷ್ಟು ಸಮಂಜಸ ಎನ್ನುವ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಮೂಡಿತು.

ಎಚ್ಚರಿಕೆ ನೀಡಿದ ನುಡಿಸಿರಿ

ಕಳೆದ ಶನಿವಾರ ಪಟ್ಟಣದ ಮುಖ್ಯ ಬಸ್ ನಿಲ್ದಾಣದಲ್ಲಿ ಬೈಕ್ ಕಳ್ಳತನವಾದ ಕುರಿತು ದೂರು ದಾಖಲಾಗಿತ್ತು. ಈ ಹಿನ್ನೆಲೆ ತಾಲೂಕಿನಲ್ಲಿ ಸರಣಿ ಕಳ್ಳತನದ ಆತಂಕ ಎನ್ನುವ ಕುರಿತು ನುಡಿಸಿರಿ ವರದಿ ಪ್ರಕಟಿಸಿತ್ತು.