ದಾಂಡೇಲಿ : ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಜಿಲ್ಲಾ ಕೇಂದ್ರ ಗ್ರಂಥಾಲಯದಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ದಾಂಡೇಲಿಯ ಗ್ರಂಥಾಲಯ ಕಟ್ಟಡವು ಸೋರುತ್ತಿದ್ದು, ಗ್ರಂಥಾಲಯದ ನಿರ್ವಹಣೆಗೆ ಮತ್ತು ಓದುಗರಿಗೆ ತೀವ್ರ ತೊಂದರೆಯಾಗಿದೆ.
2018 ರಲ್ಲಿ ನಿರ್ಮಾಣಗೊಂಡು ಉದ್ಘಾಟನೆಯಾಗಿರುವ ಈ ಕಟ್ಟಡ ಕಳೆದ ವರ್ಷವೆ ಸೋರಲು ಆರಂಭವಾಗಿತ್ತು. ಆದರೆ ಈ ವರ್ಷ ಕಟ್ಟಡ ಪೂರ್ತಿ ಸೋರತೊಡಗಿದೆ. ಇಲ್ಲಿ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಪುಸ್ತಕಗಳಿದ್ದು, ಅವುಗಳ ಸಂರಕ್ಷಣೆಯು ಅತೀ ಅಗತ್ಯ. ಇಲ್ಲಿಗೆ ಓದುಗರು ಸಹ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದು, ಇಲ್ಲಿ ಮಳೆ ನೀರು ಸೋರಿಕೆಯಿಂದಾಗಿ ಓದುಗರು ಸೋರದೆ ಇರುವ ಜಾಗ ನೋಡಿ ಕುಳಿತು ಓದುವ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದ್ದು, ಅಗತ್ಯ ಕ್ರಮವನ್ನು ಕೈಗೊಳ್ಳಲಾಗುತ್ತಿದೆ ಎಂದು ಗ್ರಂಥಾಲಯದ ಮೇಲ್ವಿಚಾರಕರಾದ ಶಿವಪ್ಪ ಗುಡಗುಡಿಯವರು ಬುಧವಾರ ಮಾಧ್ಯಮಕ್ಕೆ ತಿಳಿಸಿದ್ದಾರೆ. ಗ್ರಂಥಾಲಯದ ದುರಸ್ತಿಗೆ ಅಗತ್ಯ ಕ್ರಮವನ್ನು ಕೈಗೊಳ್ಳುವಂತೆ ಓದುಗರು ಮತ್ತು ಸಾರ್ವಜನಿಕರು ಸಹ ಆಗ್ರಹಿಸಿದ್ದಾರೆ.