ಮಾನವ ಕಳ್ಳ ಸಾಗಣೆ ತಡೆಯಲು ಸದಾ ಜಾಗೃತರಾಗಿರಬೇಕು. ನ್ಯಾ. ಮನೋಹರ ಎಂ.

ಅಂಕೋಲಾ : ಮಾನವ ಕಳ್ಳ ಸಾಗಣೆಗೆ ಹಲವು ಕಳ್ಳ ದಾರಿಗಳಿವೆ. ಆಮಿಷಗಳಿಗೆ ಬಲಿಯಾಗಿ ದೌರ್ಜನ್ಯಕ್ಕೀಡಾಗುವದಕ್ಕಿಂತ ಸದಾ ಜಾಗೃತರಾಗಿರುವದು ಒಳ್ಳೆಯದು ಎಂದು ಮಾನ್ಯ ಹಿರಿಯ ಸಿವಿಲ್ ಮತ್ತು ಜೆ.ಎಮ್.ಎಫ್.ಸಿ ನ್ಯಾಯಾಧೀಶರು ಹಾಗೂ ತಾಲೂಕು ಕಾನೂನು ಸೇವಾ ಸಮಿತಿಯ ಅಧ್ಯಕ್ಷರಾದ ಮನೋಹರ ಎಂ. ಅಭಿಪ್ರಾಯಪಟ್ಟರು. ಅವರು
ತಾಲೂಕು ಕಾನೂನು ಸೇವಾ ಸಮಿತಿ ಅಂಕೋಲಾ, ವಕೀಲರ ಸಂಘ, ರೋಟರಿ ಕ್ಲಬ್ ಅಂಕೋಲಾ, ಹಿಂದುಳಿದ ವರ್ಗಗಳ ಇಲಾಖೆ, ಅರಣ್ಯ ಇಲಾಖೆ ಹಾಗೂ ವಿವಿಧ ಸರಕಾರಿ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಹಿಂದುಳಿದ ವರ್ಗಗಳ ದೇವರಾಜ ಅರಸು ಬಾಲಕಿಯರ ವಸತಿಗೃಹದಲ್ಲಿ ಮಾನವ ಕಳ್ಳಸಾಗಣೆ ತಡೆ ಮತ್ತು ಗಿಡ ನೆಡುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಪಾಲಕರು ತಮ್ಮ ಮಕ್ಕಳನ್ನು ಸದಾ ಜಾಗೃತ ಸ್ಥಿತಿಯಲ್ಲಿರುವಂತೆ ಕಾಳಜಿವಹಿಸಬೇಕು. ವಿದ್ಯಾರ್ಥಿಗಳಲ್ಲಿ ಕಾನೂನಿನ ಅರಿವು ಮತ್ತು ಜಾಗೃತಿ ಮೂಡಿಸಿದರೆ ಮಾನವ ಕಳ್ಳಸಾಗಣೆಯ ಪಿಡುಗನ್ನು ತಡೆಯಬಹುದು. ವಿಶೇಷವಾಗಿ ಮಕ್ಕಳಲ್ಲಿ, ಮಹಿಳೆಯರಲ್ಲಿ ಅರಿವು ಮತ್ತು ಪ್ರತಿಭಟಿಸುವ ಗುಣ ಇರಬೇಕು. ವ್ಯವಸ್ಥೆಯನ್ನು ದೂರುವದಕ್ಕಿಂತ ನಮ್ಮ ಜವಾಬ್ದಾರಿಯನ್ನೂ ಅರಿಯಬೇಕು. ತಪ್ಪುಗಳನ್ನು ವಿರೋಧಿಸಿ ಮಾನವ ಮೌಲ್ಯಗಳನ್ನು ಉಳಿಸಬೇಕು. ಸಂವಿಧಾನದಲ್ಲಿ ಎಲ್ಲರಿಗೂ ರಕ್ಷಣೆ ಇದೆ. ಲೈಂಗಿಕ ದೌರ್ಜನ್ಯದಂತಹ ಪ್ರಕರಣಗಳಿಗೆ ತ್ವರಿತ ಶಿಕ್ಷೆ ನೀಡಲಾಗುತ್ತದೆ. ಬಾಲ ಕಾರ್ಮಿಕ ತಡೆ, ಬಾಲ್ಯವಿವಾಹ ತಡೆ, ಫೋಕ್ಸೊ ಕಾಯಿದೆಗಳು ಅತ್ಯಂತ ಪ್ರಬಲವಾಗಿವೆ ಎಂದರು. ಸಿವಿಲ್ ಮತ್ತು ಜೆ.ಎಮ್.ಎಫ್.ಸಿ ನ್ಯಾಯಾಧೀಶ ಹಾಗೂ ತಾಲೂಕು ಕಾನೂನು ಸೇವಾ ಸಮಿತಿಯ ಸದಸ್ಯ ಕಾರ್ಯದರ್ಶಿ ಪ್ರಶಾಂತ ಬಾದವಾಡಗಿ ಮಾತನಾಡಿ ಕಾನೂನು ಸೇವಾ ಸಮಿತಿ ಅಡಿಯಲ್ಲಿ ಉಚಿತ ಕಾನೂನು ನೆರವನ್ನು ಪಡೆಯುವ ಕುರಿತು ವಿವರಿಸಿದರು. ಹಾಗೂ ಇತ್ತೀಚೆಗೆ ವ್ಯಾಜ್ಯಗಳನ್ನು ನ್ಯಾಯಾಲಯಕ್ಕೆ ತರದೆ ಬೇರೆ ಬೇರೆ ವಿಧಾನಗಳ ಮೂಲಕ ಬಗೆಹರಿಸಿಕೊಳ್ಳುತ್ತಿರುವದು ಹೆಚ್ಚುತ್ತಿರುವ ಕುರಿತು ಖೇದ ವ್ಯಕ್ತಪಡಿಸಿದರು.
ಹಿರಿಯ ವಕೀಲರಾದ ಉಮೇಶ ಎನ್ ನಾಯ್ಕ ‘ಮಾನವ ಕಳ್ಳಸಾಗಣೆ ತಡೆ’ ಕುರಿತು ಉಪನ್ಯಾಸ ನೀಡಿ ಅಪರಿಚಿತರ ಮೇಲಿನ ಅತಿಯಾದ ನಂಬಿಕೆ ದೌರ್ಜನ್ಯಗಳಿಗೆ ದಾರಿಯಾಗುತ್ತದೆ. ಧಿಡೀರ ಶ್ರೀಮಂತರಾಗಲೂ ಅಡ್ಡದಾರಿ ಹಿಡಿದು ಮಾನವ ಕಳ್ಳಸಾಗಣೆದಾರರ ಬಲೆಗೆ ಬೀಳುತ್ತಿದ್ದಾರೆ. ಮಾನವ ಕಳ್ಳಸಾಗಣೆಯ ಉದ್ದೇಶವೆಂದರೆ ಜೀತಕ್ಕಾಗಿ ಬಳಸುವದು, ಕಾರ್ಮಿಕರಾಗಿ ಬಳಕೆ, ಅಂಗಾಂಗಗಳನ್ನು ತೆಗೆದು ಮಾರುವದು, ಮಕ್ಕಳಿಲ್ಲದವರಿಗೆ ಮಾರುವದು, ಭಿಕ್ಷಾಟನೆಗಾಗಿ ವೇಶ್ಯಾವೃತ್ತಿ, ಮಾದಕ ವಸ್ತು ಸಾಗಾಟ ಮತ್ತು ಮಾರಾಟಕ್ಕೆ ಬಳಸುವದು ಹೀಗೆ ಅನೇಕ ರೀತಿಯಲ್ಲಿ ಬಳಸಿಕೊಳ್ಳುತ್ತಾರೆ. ಅಂಕಿ ಅಂಶದ ಪ್ರಕಾರ ದೇಶದಲ್ಲಿ 4 ಲಕ್ಷಕ್ಕೂ ಅಧಿಕ ಮಕ್ಕಳು ಭಿಕ್ಷಾಟನೆಯಲ್ಲಿ ತೊಡಗಿದ್ದಾರೆ. 28 ಲಕ್ಷ ಸ್ತ್ರೀಯರು ವೇಶ್ಯಾವೃತ್ತಿಯಲ್ಲಿ ತೊಡಗಿದ್ದಾರೆ. ವಿದ್ಯಾರ್ಥಿಗಳು ಯಾವುದೇ ಪ್ರಲೋಭನೆಗಳಿಗೆ ಬಲಿಯಾಗಬೇಡಿ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಕೀಲರ ಸಂಘದ ಅಧ್ಯಕ್ಷ ಹಾಗೂ ರೋಟರಿ ಕ್ಲಬ್ ಅಧ್ಯಕ್ಷ ವಿನೋದ ಶಾನಭಾಗ ಮಾತನಾಡಿ ವಿದ್ಯಾರ್ಥಿಗಳು ತಮ್ಮ ಮೇಲೆ ನಡೆಯುವ ಹಾಗೂ ಸಮಾಜದಲ್ಲಿ ನಡೆಯುತ್ತಿರುವ ದೌರ್ಜನ್ಯಗಳನ್ನು, ಅತ್ಯಾಚಾರಗಳನ್ನು, ಧೈರ್ಯದಿಂದ ಪೊಲೀಸ್ ಇಲಾಖೆಯ ಗಮನಕ್ಕೆ ತರುವ ಧೈರ್ಯ ಮಾಡಬೇಕು ಎಂದರು. ಶಿಶು ಅಭಿವೃದ್ಧಿ ಇಲಾಖೆಯ ಸಹಾಯಕ ನಿರ್ದೇಶಕಿ ಸವಿತಾ ಶಾಸ್ತ್ರಿಮಠ ಮಾತನಾಡಿ ಹೆಣ್ಣುಮಕ್ಕಳಿಗೆ ನೌಕರಿಯ ಆಮಿಷ ಒಡ್ಡಿ ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚಾಗಿರುತ್ತದೆ. ಹೀಗಾಗಿ ಅವರು ಸದಾ ಜಾಗೃತ ಸ್ಥಿತಿಯಲ್ಲಿರಬೇಕು. ಮಕ್ಕಳನ್ನು ಕದ್ದು ಭಿಕ್ಷಾಟನೆಗೆ ಬಳಸುತ್ತಾರೆ. ಸಮಸ್ಯೆಗಳು ಎದುರಾದಾಗ ಕೂಡಲೆ ಸಹಾಯವಾಣಿಗೆ ಸಂಪರ್ಕಿಸಬೇಕು ಎಂದರು. ವೇದಿಕೆಯಲ್ಲಿ ಸರಕಾರಿ ಸಹಾಯಕ ಅಭಿಯೋಜಕ ಗಿರೀಶ ಪಟಗಾರ, ಹಿಂದುಳಿದ ವರ್ಗಗಳ ಬಾಲಕಿಯರ ವಸತಿಗೃಹದ ಮೇಲ್ವಿಚಾರಕಿ ಸೀತಾ ಗೌಡ ಉಪಸ್ಥಿತರಿದ್ದರು.
ಇದೇ ವೇಳೆ ರೋಟರಿ ಕ್ಲಬ್ ವತಿಯಿಂದ ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿ ವಿತರಿಸಲಾಯಿತು. ನ್ಯಾಯವಾದಿ ಗಜಾನನ ನಾಯ್ಕ ಸ್ವಾಗತಿಸಿದರು. ನ್ಯಾಯವಾದಿ ನಾಗಾನಂದ ಬಂಟ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಸದಸ್ಯರು, ವಕೀಲರ ಸಂಘದ ಸದಸ್ಯರು, ವಿದ್ಯಾರ್ಥಿನಿಯರು ಇದ್ದರು.