ದಾಂಡೇಲಿ: ಮಣಿಪುರ ರಾಜ್ಯದಲ್ಲಿ ಮೂವರು ಮಹಿಳೆಯರನ್ನು ವಿವಸ್ತ್ರಗೊಳಿಸಿ ಮೆರವಣಿಗೆ ನಡೆಸಿದ್ದನ್ನು ನಗರದ ಸರ್ವ ಧರ್ಮ ಮಹಿಳಾ ಸಂಘಟನೆಯು ತೀವ್ರವಾಗಿ ಖಂಡಿಸಿ, ಎಲ್ಲಾ ಆರೋಪಿಗಳನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕು ಹಾಗೂ ಸಂತ್ರಸ್ಥ ಮಹಿಳೆಯರಿಗೆ 10 ಕೋಟಿ ರೂ ಪರಿಹಾರ ಧನವನ್ನು ನೀಡಬೇಕೆಂದು ಒತ್ತಾಯಿಸಿ ರಾಜ್ಯಪಾಲರಿಗೆ ಬರೆದ ಮನವಿಯನ್ನು ತಹಶೀಲ್ದಾರ್ ಅಶೋಕ್ ಶಿಗ್ಗಾವಿಯವರ ಮೂಲಕ ಬುಧವಾರ ನೀಡಿತು.
ರಾಜ್ಯಪಾಲರಿಗೆ ಬರೆದ ಮನವಿಯಲ್ಲಿ ಮಣಿಪುರದಲ್ಲಿ ಇತ್ತಿಚೀಗೆ ಜನಾಂಗಿಯ ಗಲಭೆಯಲ್ಲಿ ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿದ್ದ ಗಲಭೆಕೊರರ ಗುಂಪು ಮೂವರು ಮಹಿಳೆಯರನ್ನು ವಿವಸ್ತ್ರಗೊಳಿಸಿ ಮೆರವಣಿಗೆ ನಡೆಸಿತ್ತಲ್ಲದೇ, ಓರ್ವ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಅಟ್ಟಹಾಸ ಮರೆದಿದ್ದಾರೆ. ಈ ಹೇಯ ಕೃತ್ಯದಿಂದ ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ, ನೀಚ ಕೃತ್ಯ ಎಸಗಿರುವ ಎಲ್ಲಾ ಆರೋಪಿಗಳನ್ನು ಬಂಧಿಸಿ, ಕಠಿಣ ಕಾನೂನು ಕ್ರಮ ಜರುಗಿಸಿಬೇಕೆಂದು ಹಾಗೂ ಸಂತ್ರಸ್ಥ ಮಹಿಳೆಯರಿಗೆ 10 ಕೋಟಿ ರೂ ಪರಿಹಾರ ಧನವನ್ನು ನೀಡಬೇಕೆಂದು ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ಸಂಘಟನೆಯ ಅಧ್ಯಕ್ಷೆ ಕರುಣಮ್ಮಾ ತೋಡಟ್ಟಿ ಹಾಗೂ ಸಂಘಟನೆಯ ಪ್ರಮುಖರುಗಳಾದ ಫರೀದಾ, ರುಕ್ಸನಾ, ಸವಿತಾ ದಂಡಗಿ, ಮೇರಿ ಮುರಾರಿ, ದಿಲ್ಸಾದ್ ಸವಣೂರು, ರಿಜ್ವಾನಾ ಬೆಳ್ಳಿಗಟ್ಟಿ, ಮಂಗಲಾ ಸಿದ್ದಪ್ಪನವರ ಮತ್ತು ಸಂಘಟನೆಯ ಪ್ರಮುಖರು ಮತ್ತು ಸದಸ್ಯರು ಉಪಸ್ಥಿತರಿದ್ದರು.