ಎಲ್ಲಿದೆಯೋ ನ್ಯಾಯ? ಮನೆಕೆಲಸಕ್ಕಿದ್ದ ಬಾಲಕಿಯ ತಲೆ ಒಡೆದ ನ್ಯಾಯಾಧೀಶನ ಪತ್ನಿ

ಇಸ್ಲಾಮಾಬಾದ್: ನ್ಯಾಯಾಧೀಶರು, ನ್ಯಾಯಮೂರ್ತಿಗಳನ್ನು ನ್ಯಾಯ ನೀಡುವವರೆಂದು ತಪ್ಪಿಗೆ ಶಿಕ್ಷೆ ನೀಡಿ ನ್ಯಾಯವನ್ನು ಎತ್ತಿ ಹಿಡಿಯುವವರೆಂದು ನಾವೆಲ್ಲರೂ ಭಾವಿಸಿದ್ದೇವೆ. ನಂಬಿದ್ದೇವೆ. ಆದರೆ ಹೀಗೆ ನ್ಯಾಯವನ್ನು ಕಾಯುವವರೇ ಅನ್ಯಾಯ ಮಾಡಿದರೆ ನ್ಯಾಯ ಕೇಳುವುದಾದರೂ ಯಾರನ್ನು ಇಂತಹ ಒಂದು ದುಸ್ಥಿತಿ ನಿರ್ಮಾಣವಾಗಿರುವುದು ನೆರೆಯ ರಾಷ್ಟ್ರ ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ. ಸಮಾಜದ ಉನ್ನತಸ್ತರದಲ್ಲಿದ್ದ ನ್ಯಾಯಾಧೀಶ ಹಾಗೂ ಆತನ ಕುಟುಂಬವೇ ಇಲ್ಲಿ ತಪ್ಪಿತಸ್ಥ ಸ್ಥಾನದಲ್ಲಿದ್ದು, ಪುಟ್ಟ ಬಾಲಕಿಯೊಬ್ಬಳ ಶೋಚನೀಯ ಸ್ಥಿತಿಗೆ ಕಾರಣರಾಗಿದ್ದಾರೆ.

ಮೊದಲನೇಯದಾಗಿ ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ನಿಯಮದ ಪ್ರಕಾರ ಪುಟ್ಟ ಮಕ್ಕಳನ್ನು ಮನೆಯಲ್ಲಿ ಇರಿಸಿ ಕೆಲಸ ಮಾಡಿಸುವುದೇ ದೊಡ್ಡ ತಪ್ಪು. ಆದರೆ ಈ ನ್ಯಾಯಾಧೀಶನ ಮನೆಯಲ್ಲಿ ಅದಕ್ಕಿಂತಲೂ ಘೋರ ಅನ್ಯಾಯವಾಗಿದೆ. ಮನೆಯಲ್ಲಿ ಕೆಲಸಕ್ಕಿದ್ದ ಅಪ್ರಾಪ್ತ ಬಾಲಕಿಗೆ ಚಿತ್ರಹಿಂಸೆ ನೀಡಿ ಆಸ್ಪತ್ರೆ ಸೇರುವಂತೆ ಈ ಕುಟುಂಬ ಮಾಡಿದೆ. ಮನೆಯಲ್ಲಿದ್ದ ಬಾಲಕಿಗೆ ನಿರಂತರ ಕಿರುಕುಳ ನೀಡಿ ಹೊಡೆದು ಬಡಿದ ಪರಿಣಾಮ ಬಾಲಕಿ ಅಸ್ವಸ್ಥಳಾಗಿ ಆಸ್ಪತ್ರೆ ಸೇರಿದ್ದಾಳೆ.

ಪಾಕಿಸ್ತಾನದಲ್ಲಿ ಬಡತನ ತೀವ್ರವಾಗಿದ್ದು ಪೋಷಕರು ಒಂದು ಹೊತ್ತಿನ ತುಉತ್ತಿನ ಚೀಲ ತುಂಬಿಸಿಕೊಳ್ಳುವುದಕ್ಕಾಗಿ ತಮ್ಮ ಪುಟ್ಟ ಪುಟ್ಟ ಮಕ್ಕಳನ್ನು ಶ್ರೀಮಂತರ ಮನೆಗಳಲ್ಲಿ ಕೆಲಸಕ್ಕೆ ಬಿಡುತ್ತಾರೆ. ಆರು ವರ್ಷದ ಮಕ್ಕಳಿಂದ ಹಿಡಿದು 14ರೊಳಗಿನ ಸಾಕಷ್ಟು ಮಕ್ಕಳು ಪಾಕಿಸ್ತಾನದ ಶ್ರೀಮಂತರ ಮನೆಯಲ್ಲಿ ಕೆಲಸ ಮಾಡುತ್ತಾರೆ.  ಇಂತಹ ಮಕ್ಕಳ ಕೈಯಿಂದ ಶ್ರೀಮಂತ ಕುಟುಂಬಗಳು ಬರೀ ನೌಕರಿ ಮಾಡಿಸಿಕೊಳ್ಳುವುದು ಮಾತ್ರವಲ್ಲ, ಮಾನಸಿಕ ದೈಹಿಕ ಕಿರುಕುಳವನ್ನು ನೀಡುತ್ತಾರೆ ಈಗ ಓರ್ವ ಜಡ್ಜ್ ಮನೆಯಲ್ಲೇ ಬಾಲಕಿಯೊಬ್ಬಳಿಗೆ ತೀವ್ರವಾಗಿ ಕಿರುಕುಳ ನೀಡಿ ಆಸ್ಪತ್ರೆ ಸೇರುವಂತೆ ಮಾಡಿದ್ದಾರೆ ಎಂದು ಘಟನೆ ಬಗ್ಗೆ ಪಾಕಿಸ್ತಾನ್ ಸಂಸತ್ ಸದಸ್ಯೆ ಮೆಹ್ನಾಜ್ ಅಕ್ಬರ್ ಅಜೀಜ್ ಹೇಳಿದ್ದು, ನ್ಯಾಯಕ್ಕೆ ಆಗ್ರಹಿಸಿದ್ದಾರೆ. ಅಲ್ಲದೇ  ಮನೆಕೆಲಸದವರನ್ನು ರಕ್ಷಿಸುವುದಕ್ಕಾಗಿ ಕೈಗೊಂಡಿರುವ ಬಿಲ್ ಸಂಸತ್‌ನಲ್ಲಿ ಪಾಸಾಗಬೇಕು ಎಂದಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಬಾಲಕಿಯ ವೀಡಿಯೋ ಹಾಗೂ ಫೋಟೋ ವೈರಲ್ ಆಗುತ್ತಿದ್ದಂತೆ ಜನ ಬೀದಿಗಳಿದ್ದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು ನ್ಯಾಯಾ ನೀಡುವಂತೆ ಆಗ್ರಹಿಸಿದ್ದಾರೆ. ಟ್ವಿಟ್ಟರ್‌ನಲ್ಲಿ ಕೆಲವರು ಹಾಕಿಕೊಂಡ ಪೋಸ್ಟ್ ಪ್ರಕಾರ, ನ್ಯಾಯಾಧೀಶರ ಪತ್ನಿ ಈ ಬಾಲಕಿಗೆ ಎಷ್ಟು ಕಿರುಕುಳ ನೀಡಿದ್ದಾಳೆ ಎಂದರೆ, ಆಕೆಯ ಎರಡು ಕೈಗಳು, ಪಕ್ಕೆಲುಬುಗಳು ಮುರಿದು ಹೋಗಿವೆ. ತಲೆಯಲ್ಲಿ ಆಗಿರುವ ಗಾಯದಲ್ಲಿ ಹುಳುಗಳಾಗಿವೆ ಎಂದು ಕೆಲವರು ಮಾಹಿತಿ ನೀಡಿದ್ದು ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ.  ಆದರೆ ಇಸ್ಲಾಮಾಬಾದ್‌ನ ಪೊಲೀಸರು ಪ್ರಕರಣವನ್ನು ಸಣ್ಣ ಮಾಡಲು ಎಫ್‌ಐಆರ್‌ನಲ್ಲಿ ಅಗತ್ಯವಾದ ಸೆಕ್ಷನ್‌ಗಳನ್ನು ಕೂಡ ಸೇರಿಸಿಲ್ಲ ಎಂಬ ಆರೋಪವನ್ನು ಕೆಲವರು ಮಾಡಿದ್ದಾರೆ. 

ಘಟನೆ ಬಗ್ಗೆ ಪಾಕಿಸ್ತಾನದ ಮಾನವ ಹಕ್ಕುಗಳ ಆಯೋಗವೂ ಪ್ರಕರಣ ದಾಖಲಿಸಿಕೊಂಡಿದ್ದು ವಿಚಾರಣೆಗೆ ಮುಂದಾಗಿದೆ. ಇತ್ತ ವಿಚಾರ ತಿಳಿಯುತ್ತಿದ್ದಂತೆ ಬಾಲಕಿಗೆ ಕಿರುಕುಳ ನೀಡಿದಿ ಸಿವಿಲ್ ಜಡ್ಜ್ ನಿವಾಸದ ಮುಂದೆ ಜನ ಪ್ರತಿಭಟನೆ ನಡೆಸಿದ್ದು ನ್ಯಾಯಕ್ಕೆ ಆಗ್ರಹಿಸಿದ್ದಾರೆ. ಈ ಘಟನೆ ಪಾಕಿಸ್ತಾನದಲ್ಲಿ ಮನೆ ಕೆಲಸ ಮಾಡುವವರ ಸುರಕ್ಷತೆಯ ಬಗ್ಗೆ ಪ್ರಶ್ನೆ ಮಾಡುವಂತೆ ಮಾಡಿದೆ. 

ಇತ್ತ ಪುಟ್ಟ ಬಾಲಕಿಯ ವೀಡಿಯೋ ಹೇಗಿದೆ ಎಂದರೆ ಆಕೆಯ ತಲೆಯ ಹಿಂಭಾಗ ತಲೆ ಭಾಗ ಬಿಟ್ಟಂತಹ ಹಲವು ಗಾಯಗಳಿದ್ದು, ಕೈಗಳು ಮುರಿದು ಹೋಗಿವೆ. ಪಕ್ಕೆಲುಬಿಗೂ ಹಾನಿಯಾಗಿದೆ. ಪುಟ್ಟ ಬಾಲಕಿಗೆ ಈ ರೀತಿ ಹಿಂಸೆ ನೀಡಿ ಸಾವು ಬದುಕಿನ ಮಧ್ಯೆ ಹೋರಾಡುವಂತಹ ಸ್ಥಿತಿ ತಂದಿಟ್ಟ ಆ ಕುಟುಂಬದವರು ಮನುಷ್ಯ ರೂಪದಲ್ಲಿರುವ ರಕ್ಕಸರೇ ಆಗಿರಬೇಕು.