ವಾಷಿಂಗ್ಟನ್: ಪ್ರಧಾನಿ ನರೇಂದ್ರ ಮೋದಿ ಅಮರಿಕ ಅಧ್ಯಕ್ಷ ಜೋ ಬೈಡನ್ ದಂಪತಿಗೆ ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವ ವಸ್ತುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ.
ವಿದೇಶದ ಅತಿಥಿಗಳು ಭಾರತಕ್ಕೆ ಆಗಮಿಸಿದಾಗ ಅಥವಾ ತಾವೇ ವಿದೇಶಕ್ಕೆ ಹೋದಾಗ ಮೋದಿ ಪ್ರತಿ ಬಾರಿ ಭಾರತೀಯ ಕಲೆ, ಸಂಸ್ಕೃತಿಗೆ ಸಂಬಂಧಿಸಿದ ವಸ್ತುಗಳನ್ನು ಉಡುಗೊರೆಯಾಗಿ ನೀಡುತ್ತಾರೆ. ಅದೇ ರೀತಿಯಾಗಿ ಈ ಬಾರಿಯೂ ಬೈಡನ್ ದಂಪತಿಗೆ ಹಲವು ಉಡುಗೊರೆಯನ್ನು ನೀಡಿದ್ದಾರೆ.
ಅಮೆರಿಕದ ಅಧ್ಯಕ್ಷರ ಅಧಿಕೃತ ನಿವಾಸ ಶ್ವೇತ ಭವನಕ್ಕೆ ಭೇಟಿ ನೀಡಿದ ಮೋದಿ ಅವರು ಜೋ ಬೈಡನ್ ದಂಪತಿಗೆ ಮೈಸೂರಿನಲ್ಲಿ ಪ್ರಖ್ಯಾತಿ ಹೊಂದಿರುವ ಶ್ರೀಗಂಧದಿಂದ ತಯಾರಿಸಲಾದ ಪೆಟ್ಟಿಗೆಯಲ್ಲಿ ನಾನಾರೀತಿಯ ಉಡುಗೊರೆಗಳನ್ನು ನೀಡಿದ್ದಾರೆ. ಈ ಉಡುಗೊರೆ ಪೆಟ್ಟಿಗೆಯನ್ನು ರಾಜಸ್ಥಾನದಲ್ಲಿರುವ ಜೈಪುರದ ಖ್ಯಾತ ಕುಶಲಕರ್ಮಿಯೊಬ್ಬರು ತಯಾರಿಸಿದ್ದಾರೆ.
ಈ ಪೆಟ್ಟಿಗೆಯಲ್ಲಿ ಪೇಪಿಯರ್ ಮಾಚೆ ಎಂಬ ಸಣ್ಣ ಪೆಟ್ಟಿಗೆಯನ್ನು ಇರಿಸಲಾಗಿದೆ. ಈ ಸಣ್ಣ ಪೆಟ್ಟಿಗೆಯಲ್ಲಿ ಒಂದು ಹಸಿರು ಡೈಮಂಡ್ ಅನ್ನು ಇರಿಸಲಾಗಿದೆ. ಈ ಪೆಟ್ಟಿಗೆ ಕಾರ್-ಎ-ಕಲಮ್ದಾನಿ ಎಂದು ಕರೆಯಲ್ಪಡುವ ಕಾಶ್ಮೀರದ ಪೇಪಿಯರ್ ಮಾಚೆ ಎಂಬ ಕಾಗದದ ತಿರುಳಿನಿಂದ ತಯಾರಿಸಲಾಗಿದೆ. ಈ ಹಸಿರು ಬಣ್ಣದ ಡೈಮಂಡ್ ಭಾರತದ 75 ವರ್ಷಗಳ ಸ್ವಾತಂತ್ರ್ಯವನ್ನು ಮತ್ತು ಸುಸ್ಥಿರ ಅಂತರಾಷ್ಟ್ರೀಯ ಸಂಬಂಧಗಳನ್ನು ಸಂಕೇತಿಸುತ್ತದೆ.
ಅಲ್ಲದೇ ಈ ಗಂಧದ ಪೆಟ್ಟಿಗೆಯಲ್ಲಿ ಹಿಂದೂಗಳು ಪೂಜಿಸುವ ವಿಘ್ನನಿವಾರಕ ಎಂದೇ ಖ್ಯಾತಿಯಾಗಿರುವ ಗಣೇಶನ ಮೂರ್ತಿಯನ್ನು ಇರಿಸಲಾಗಿದೆ. ಈ ಮೂರ್ತಿಯನ್ನು ಕೋಲ್ಕತ್ತಾದ ಐದನೇ ತಲೆಮಾರಿನ ಬೆಳ್ಳಿ ತಯಾರಿಸುವ ಅಕ್ಕಸಾಲಿಗರು ಕರಕುಶಲತೆಯಿಂದ ತಯಾರಿಸಿದ್ದಾರೆ. ಈ ಪೆಟ್ಟಿಗೆಯಲ್ಲಿ ಮನೆಯನ್ನು ಬೆಳಗುವ ಬೆಳ್ಳಿಯ ದೀಪಗಳನ್ನು ಒಳಗೊಂಡಿದೆ. ಇದನ್ನೂ ಸಹ ಇದೇ ಅಕ್ಕಸಾಲಿಗರು ತಯಾರಿಸಿರುತ್ತಾರೆ.
ಮೋದಿ ಅಮೇರಿಕ ಅಧ್ಯಕ್ಷರಿಗೆ ನೀಡಿದ ಪೆಟ್ಟಿಗೆ 10 ದಾನಗಳನ್ನು ಒಳಗೊಂಡಿದೆ. ಈ ದಾನಗಳಲ್ಲಿ ಮೊದಲನೆಯದು ಗೋದಾನ. ಗೋದಾನದ ಬದಲಿಗೆ ಪ್ರಧಾನಿ ಮೋದಿಯವರು ಪಶ್ಚಿಮ ಬಂಗಾಳದ ನುರಿತ ಕುಶಲಕರ್ಮಿಗಳು ತಯಾರಿಸಿದ ಬೆಳ್ಳಿಯ ತೆಂಗಿನಕಾಯಿಯನ್ನು ದಾನವನ್ನಾಗಿ ನೀಡಿದ್ದಾರೆ. ಭೂದಾನದ ಬದಲಿಗೆ ಕರ್ನಾಟಕದ ಮೈಸೂರಿನಿಂದ ತಂದ ಪರಿಮಳಯುಕ್ತ ಶ್ರೀಗಂಧದ ತುಂಡನ್ನು ನೀಡಿದ್ದಾರೆ. ತಿಲದಾನವಾಗಿ (ಎಳ್ಳು ದಾನ) ತಮಿಳುನಾಡಿನಿಂದ ಪಡೆದ ಬಿಳಿ ಎಳ್ಳನ್ನು ಬೈಡನ್ ದಂಪತಿಗೆ ನೀಡಿದ್ದಾರೆ. ಇನ್ನು ಹಿರಣ್ಯದಾನವಾಗಿ (ಚಿನ್ನದಾನ) ರಾಜಸ್ಥಾನದಲ್ಲಿ ತಯಾರಿಸಲ್ಪಟ್ಟ 24 ಕ್ಯಾರೆಟ್ ಹಾಲ್‌ಮಾರ್ಕ್ ಹೊಂದಿರುವ ಪರಿಶುದ್ಧ ಚಿನ್ನದ ನಾಣ್ಯವನ್ನು ನೀಡಿದ್ದಾರೆ. ರುಪಾಯಿದಾನವಾಗಿ 99.5% ಹಾಲ್‌ಮಾರ್ಕ್ ಹೊಂದಿರುವ ಬೆಳ್ಳಿಯ ನಾಣ್ಯವನ್ನು ನೀಡಲಾಗಿದೆ. ಲವಣದಾನವಾಗಿ ಗುಜರಾತ್‌ನಿಂದ ತಂದ ಉಪ್ಪನ್ನು ಸಮರ್ಪಿಸಿದ್ದಾರೆ.
ಮುಂದುವರೆದಂತೆ ಈ ಪೆಟ್ಟಿಗೆಯು ಪಂಜಾಬ್‌ನಲ್ಲಿ ತಯಾರಿಸಿದ ತುಪ್ಪ ಮತ್ತು ಬೆಣ್ಣೆಯನ್ನು ಒಳಗೊಂಡಿದೆ. ಅಲ್ಲದೇ ಜಾರ್ಖಂಡ್‌ನಲ್ಲಿ ಕೈಯಿಂದ ತಯಾರಿಸಿದ ರೇಷ್ಮೆ ಬಟ್ಟೆ, ಉತ್ತರಾಖಂಡದ ಉದ್ದ ಅಕ್ಕಿ ಮತ್ತು ಮಹಾರಾಷ್ಟ್ರದ ಬೆಲ್ಲವನ್ನು ಒಳಗೊಂಡಿದೆ.
1973ರಲ್ಲಿ ಡಬ್ಲ್ಯುಬಿ ಯೀಟ್ಸ್ ಭಾರತೀಯ ಉಪನಿಷತ್ ಇಂಗ್ಲಿಷ್‌ನಲ್ಲಿ ಅನುವಾದ ಮಾಡಿದ್ದರು ಈ ಅನುವಾದಕ್ಕೆ ಲೇಖಕರಾಗಿ ಪುರೋಹಿತ ಸ್ವಾಮಿ ಸಹ ಸಹಕಾರ ನೀಡಿದ್ದರು. ಇದು ಯೀಟ್ಸ್ ಅವರ ಅಂತಿಮ ಕೃತಿಗಳಲ್ಲಿ ಒಂದಾಗಿದ್ದು, ಈ ಪುಸ್ತಕದ ಮೊದಲ ಆವೃತ್ತಿಯಾದ ‘ದಿ ಟೆನ್ ಪ್ರಿನ್ಸಿಪಾಲ್ ಉಪನಿಷತ್’ನ ಪ್ರತಿಯನ್ನು ಪ್ರಧಾನಿ ಮೋದಿಯವರು ಜೋ ಬೈಡನ್ ಅವರಿಗೆ ಉಡುಗೊರೆಯಾಗಿ ನೀಡಿದ್ದಾರೆ. ಅಲ್ಲದೇ ಅಮೆರಿಕದ ಪ್ರಥಮ ಮಹಿಳೆ ಡಾ.ಜಿಲ್ ಬೈಡನ್ ಅವರಿಗೆ 7.5 ಕ್ಯಾರೆಟ್‌ನ ಹಸಿರು ವಜ್ರವನ್ನು ಉಡುಗೊರೆಯಾಗಿ ನೀಡಿದ್ದಾರೆ.