ಆರೋಗ್ಯ ವ್ಯವಸ್ಥೆಯ ಸುಧಾರಣೆಗಾಗಿ ಬಿಬಿಎಂಪಿ ಹೊಸ ಪ್ಲಾನ್, ರೋಗ ನಿಯಂತ್ರಣಕ್ಕೆ ಆ್ಯಪ್ ಬಳಕೆ

ಬೆಂಗಳೂರು, ಜುಲೈ 27: ದೇಶದ ಅತ್ಯುತ್ತಮ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಐಐಎಸ್​ಸಿ ಮತ್ತೊಂದು ಪ್ರಯೋಗಕ್ಕೆ ಮುಂದಾಗಿದೆ. ಬೆಂಗಳೂರಿನ IISc ನಲ್ಲಿರುವ AI ಮತ್ತು ರೊಬೊಟಿಕ್ಸ್ ಟೆಕ್ನಾಲಜಿ ಪಾರ್ಕ್ ನಗರದಲ್ಲಿನ ಎಲ್ಲಾ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳಿಂದ ನಿಖರವಾದ ರೋಗದ ಡೇಟಾವನ್ನು ಸಂಗ್ರಹಿಸಲು ಬಿಬಿಎಂಪಿಗೆ ಸಹಾಯ ಮಾಡುವ ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸುತ್ತಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಸುಮಾರು 1,000 ಖಾಸಗಿ ಆಸ್ಪತ್ರೆಗಳಿವೆ, ಆದರೆ ಪ್ರಸ್ತುತ ಕೇಂದ್ರ ಸರ್ಕಾರದ ಸಮಗ್ರ ಆರೋಗ್ಯ ಮಾಹಿತಿಯಡಿ ಸುಮಾರು 400 ಆಸ್ಪತ್ರೆಗಳು ಮಾತ್ರ ರೋಗದ ಡೇಟಾವನ್ನು ನಮೂದಿಸುತ್ತಿವೆ ಎಂದು ಬಿಬಿಎಂಪಿ ವಿಶೇಷ ಆಯುಕ್ತ (ಆರೋಗ್ಯ) ಡಾ ಕೆ ವಿ ತ್ರಿಲೋಕ್ ಚಂದ್ರ ಅವರು ತಿಳಿಸಿದ್ದಾರೆ.

ಇನ್ನು ಮತ್ತೊಂದೆಡೆ ಆ್ಯಪ್ ಅಭಿವೃದ್ಧಿ ಆರಂಭಿಕ ಹಂತದಲ್ಲಿದೆ ಎಂದು ಎಆರ್‌ಟಿಪಾರ್ಕ್‌ನ ಪ್ರೋಗ್ರಾಂ ಡೈರೆಕ್ಟರ್ ಡಾ.ಭಾಸ್ಕರ್ ರಾಜಕುಮಾರ್ ಹೇಳಿದ್ದಾರೆ. ಅಪ್ಲಿಕೇಶನ್ ಅಭಿವೃದ್ಧಿಯ ಮೊದಲ ಹಂತದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮೇಲೆ ಗಮನಹರಿಸಲಾಗುತ್ತದೆ. ಮತ್ತು ಎರಡನೇ ಹಂತದಲ್ಲಿ ಖಾಸಗಿ ಆಸ್ಪತ್ರೆಗಳು ಮತ್ತು ಲ್ಯಾಬ್‌ಗಳ ಮೇಲೆ ಗಮನಹರಿಸಲಾಗುತ್ತದೆ. ಮೊದಲ ಹಂತದಲ್ಲಿ ಆ್ಯಪ್​ನಲ್ಲಿ ಸಮುದಾಯದಿಂದ ರೋಗದ ಡೇಟಾವನ್ನು ಸಂಗ್ರಹಿಸಲು ಆಶಾ ಕಾರ್ಯಕರ್ತರು ಮತ್ತು ನರ್ಸ್​ಗಳು ಸಹಕಾರಿಯಾಗಲಿದ್ದಾರೆ.

ಆರಂಭಿಕ ಹಂತದಲ್ಲಿ ಈಗ ಸುಮಾರು 15 ಆಶಾ ಕಾರ್ಯಕರ್ತರು ಅಪ್ಲಿಕೇಶನ್‌ನಲ್ಲಿ ಡೆಂಗ್ಯೂ ಡೇಟಾವನ್ನು ಸಂಗ್ರಹಿಸುತ್ತಿದ್ದಾರೆ. ಈ ಮಾಹಿತಿ ಹಂತ ಮುಗಿದ ನಂತರ, ಅಪ್ಲಿಕೇಶನ್ ಪರಿಶೀಲನೆ ಮಾಡಲಾಗುತ್ತೆ. ಇದರಲ್ಲಿ ವೈದ್ಯಕೀಯ ಅಧಿಕಾರಿಗಳು ಡೆಂಗ್ಯೂ ಪ್ರಕರಣಗಳು ಅಥವಾ ಸಂತಾನೋತ್ಪತ್ತಿಗಳ ಸ್ಥಳ ಬಗ್ಗೆ ಪರಿಶೀಲಿಸುತ್ತಾರೆ. ಮೂರನೇ ಹಂತದಲ್ಲಿ ಔಷಧಿ ಸಿಂಪಡಣೆ ತಂಡವು ರೋಗದ ಸಂತಾನೋತ್ಪತ್ತಿ ಸ್ಥಳಗಳಲ್ಲಿನ ತಮ್ಮ ಮೂಲ ಕಡಿತ ಚಟುವಟಿಕೆಗಳನ್ನು ವರದಿ ಮಾಡುತ್ತವೆ. ಈ ಎಲ್ಲಾ ಮಾಹಿತಿ ಆ್ಯಪ್​ನಲ್ಲಿ ಇರಲಿದೆ.

ಮೊದಲ ಹಂತವನ್ನು ಕೆಲವೇ ತಿಂಗಳುಗಳಲ್ಲಿ ನಿಯೋಜಿಸಲಾಗುವುದು ಮತ್ತು ಈ ಮೂಲಕ ನಾವು ಎಲ್ಲಾ ಪ್ರಾರ್ಥಮಿಕ ಆರೋಗ್ಯ ಕೇಂದ್ರಗಳಿಂದ ಒಂದೇ ಆ್ಯಪ್​ನಲಗಲಿ ಡೆಂಗ್ಯೂ ಡೇಟಾವನ್ನು ಹೊಂದುತ್ತೇವೆ. ಡೆಂಗ್ಯೂ ಸಮಯ ಕಳೆದುಕೊಳ್ಳಲು ಸಾಧ್ಯವಿಲ್ಲದ ಕಾರಣ ನಾವು ಈ ಅಪ್ಲಿಕೇಶನ್ ಅನ್ನು ತಕ್ಷಣವೇ ಪ್ರಾರಂಭಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಡಾ.ರಾಜಕುಮಾರ್ ತಿಳಿಸಿದರು.