ದಾಂಡೇಲಿಯ ಟಿಂಬರ್ ಡಿಪೋದಲ್ಲಿ ಭರದಿಂದ ನಡೆಯುತ್ತಿರುವ ಮರಮುಟ್ಟುಗಳ ಹರಾಜು ಪ್ರಕ್ರಿಯೆ

ದಾಂಡೇಲಿ : ಜಗತ್ಪ್ರಸಿದ್ಧ ಸಾಗುವಾನಿ, ಸೀಸಂ ಕಟ್ಟಿಗೆಗಳಿಗೆ ಹೆಸರುವಾಸಿಯಾದ ಊರು ದಾಂಡೇಲಿ. ಹಾಗಾಗಿ ದಾಂಡೇಲಿಯ ಸಾಗುವಾನಿ ಮತ್ತು ಸೀಸಂಗೆ ಎಲ್ಲಿಲ್ಲದ ಬೇಡಿಕೆ. ವರ್ಷಕ್ಕೆ ಮೂರರಿಂದ ನಾಲ್ಕು ಬಾರಿ ಸಾಗುವಾನಿ, ಸೀಸಂ ಸೇರಿದಂತೆ ವಿವಿಧ ಜಾತಿಯ ಕಟ್ಟಿಗೆಗಳ ನಾಟಗಳನ್ನು ದಾಂಡೇಲಿಯ ಟಿಂಬರ್ ಡಿಪೋದಲ್ಲಿ ಹರಾಜು ಮಾಡಲಾಗುತ್ತಿದೆ. ಇತ್ತೀಚಿನ ಕೆಲ ವರ್ಷಗಳಿಂದ ಆನ್ಲೈನ್ ಮೂಲಕ ಹರಾಜು ಪ್ರಕ್ರಿಯೆ ನಡೆಯುತ್ತಿದ್ದು, ಕೋಟ್ಯಾಂತರ ರೂಪಾಯಿಯ ಕಟ್ಟಿಗೆಗಳು ಇಲ್ಲಿ ಹರಾಜಾಗುತ್ತಿವೆ.

ನಗರದ ಟಿಂಬರ್ ಡಿಪೋದಲ್ಲಿ ನಾಲ್ಕು ದಿನಗಳವರೆಗೆ ನಡೆಯಲಿರುವ ಮರಮುಟ್ಟುಗಳ ಹರಾಜು ಪ್ರಕ್ರಿಯೆಗೆ ನಿನ್ನೆ ಸೋಮವಾರ ಚಾಲನೆ ನೀಡಲಾಗಿದೆ. ಇಂದು ಮಂಗಳವಾರವೂ ಹರಾಜು ಪ್ರಕ್ರಿಯೆ ಮುಂದುವರಿದಿದೆ. ಉಪ ಅರಣ್ಯ ಸಂರಕ್ಷಣಾಧಿಕಾರಿ ಸಿ.ಎಚ್.ಬಾಲಚಂದ್ರ ಮತ್ತು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಜಿ.ಕೆ.ಶೇಟ್ ಅವರ ಮಾರ್ಗದರ್ಶನದೊಂದಿಗೆ ವಲಯಾರಣ್ಯಾಧಿಕಾರಿ ಬಸವರಾಜ್.ಎಂ ಅವರ ನೇತೃತ್ವದಡಿ ಅರಣ್ಯ ಇಲಾಖೆಯ ಸಿಬ್ಬಂದಿಗಳ ಸಹಕಾರದಲ್ಲಿ ಮರಮುಟ್ಟುಗಳ ಹರಾಜು ಕಾರ್ಯ ನಡೆಯುತ್ತಿದೆ.

ಮರಮುಟ್ಟುಗಳ ಹರಾಜಿಗೆ ಜಿಲ್ಲೆ, ಹೊರ ಜಿಲ್ಲೆ ಹಾಗೂ ರಾಜ್ಯ, ಹೊರ ರಾಜ್ಯಗಳಿಂದಲೂ ಜನ ಭಾಗವಹಿಸಿದ್ದಾರೆ. ನಿನ್ನೆಯಿಂದ ಈವರೇಗೆ ಅಂದಾಜು 15 ಕೋಟಿ ರೂಪಾಯಿ ಮೊತ್ತದ ಕಟ್ಟಿಗೆ ಹರಾಜು ಆಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಮರಮುಟ್ಟುಗಳನ್ನು ಖರೀದಿಸಲು ಹರಾಜಿನಲ್ಲಿ ಭಾಗವಹಿಸಿರುವವರು ಇಲ್ಲಿಯ ಮರಮುಟ್ಟುಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.