ಬೆಂಗಳೂರು: ‘ಮನುಷ್ಯನ ಆಯುಷ್ಯ ಚಿಕ್ಕದಾಗಿದೆ ಮತ್ತು ಪ್ರಕರಣ ಮುಕ್ತಾಯವಾದ ನಂತರ ಕಕ್ಷಿದಾರರು ತಮ್ಮ ಜೀವನವನ್ನು ಮರುನಿರ್ಮಾಣ ಮಾಡಿಕೊಳ್ಳಬೇಕಾಗುತ್ತದೆ. ಇದನ್ನು ಪರಿಗಣಿಸಿ ವೈವಾಹಿಕ ಪ್ರಕರಣಗಳನ್ನು ಸಮರೋಪಾದಿಯಲ್ಲಿ ವಿಚಾರಣೆ ನಡೆಸಿ ವಿಲೇವಾರಿ ಮಾಡಬೇಕು’ ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ. ತಮ್ಮ ವಿವಾಹವನ್ನು ಅನೂರ್ಜಿತಗೊಳಿಸುವಂತೆ ಕೋರಿ ವ್ಯಕ್ತಿಯೊಬ್ಬರು 2016ರಲ್ಲಿ ಸಲ್ಲಿಸಿದ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ತ್ವರಿತ ನ್ಯಾಯದಾನದ ಹಕ್ಕನ್ನು ಸುಪ್ರೀಂ ಕೋರ್ಟ್ ಕಲಂ 21ರ ಅಡಿಯಲ್ಲಿ ಸಾಂವಿಧಾನಿಕ ಖಾತರಿ ಎಂದು ಗುರುತಿಸಿದೆ. ಹಾಗಾಗಿ ಪ್ರಕರಣದ ತ್ವರಿತ ವಿಲೇವಾರಿಗೆ ನಿರ್ದೇಶನ ನೀಡಬೇಕು ಎಂದು ಅರ್ಜಿದಾರರ ಪರ ವಕೀಲರು ವಾದ ಮಂಡಿಸಿದ್ದರು.
ಈ ವಾದದೊಂದಿಗೆ ನ್ಯಾಯಾಲಯವು ಸಹಮತವನ್ನು ಹೊಂದಿದೆ. ಮನುಷ್ಯನ ಚಿಕ್ಕ ಜೀವಿತಾವಧಿಯನ್ನು ಪರಿಗಣಿಸಿಯಾದರೂ ವೈವಾಹಿಕ ಪ್ರಕರಣಗಳ ತ್ವರಿತ ವಿಲೇವಾರಿ ಮಾಡುವುದು ಅಗತ್ಯ ಎಂದು ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರಿದ್ದ ನ್ಯಾಯಪೀಠ ತೀರ್ಪಿನಲ್ಲಿ ಉಲ್ಲೇಖಿಸಿದೆ. ಇದೇ ವೇಳೆ, ಇತಿಹಾಸಕಾರ ಥಾಮಸ್ ಕಾರ್ಲೈಲ್ನ ಜೀವನವು ಚಿಕ್ಕದಾಗಿದೆ ಎಂಬ ವಾಕ್ಯವನ್ನು ನ್ಯಾಯಮೂರ್ತಿಗಳು ಉಲ್ಲೇಖಿಸಿದ್ದಾರೆ.
ವಿವಾಹವನ್ನು ಅನೂರ್ಜಿತಗೊಳಿಸುವಂತೆ ಕೋರಿ ಮನವಿ ಸಲ್ಲಿಕೆಯಾದಾಗ ಅಂಥ ಸರ್ಜಿಗಳನ್ನು ನ್ಯಾಯಾಲಯಗಳು ಒಂದು ವರ್ಷದ ಒಳಗಿನ ಮಿತಿಯೊಳಗೆ ಅದರ ವಿಚಾರಣೆ ಮುಕ್ತಾಯಗೊಳಿಸಲು ಮತ್ತು ವಿಲೇವಾರಿ ಮಾಡಲು ಎಲ್ಲಾ ಪ್ರಯತ್ನಗಳನ್ನು ಮಾಡಬೇಕು. ಹಾಗೆ ಮಾಡಿದರೆ ಅರ್ಜಿದಾರರಿಗೆ ತಮ್ಮ ಜೀವನವನ್ನು ಪುನರ್ ರಚಿಸಲು ಅವಕಾಶ ದೊರೆಯಲಿದೆ. ಪ್ರಕರಣಗಳ ವಿಲೇವಾರಿ ವಿಳಂಬ ಮಾಡಿದರೆ ಕಕ್ಷಿದಾರರ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಈ ಬಗ್ಗೆ ಯಾವುದೇ ಚರ್ಚೆಯ ಅಗತ್ಯವಿಲ್ಲ ಎಂದು ಕೃಷ್ಣ ಎಸ್ ದೀಕ್ಷಿತ್ ಹೇಳಿದ್ದಾರೆ ಎಂದು ‘ಪಿಟಿಐ’ ಸುದ್ದಿಸಂಸ್ಥೆ ವರದಿ ಮಾಡಿದೆ.
ಏಳು ವರ್ಷಗಳ ಹಿಂದಿನ ಪ್ರಕರಣವನ್ನು ಮೂರು ತಿಂಗಳೊಳಗೆ ವಿಲೇವಾರಿ ಮಾಡುವಂತೆ ಕೌಟುಂಬಿಕ ನ್ಯಾಯಾಲಯಕ್ಕೆ ಸೂಚಿಸಿರುವ ಹೈಕೋರ್ಟ್, ತೀರ್ಪನ್ನು ಎಲ್ಲಾ ಸಂಬಂಧಿತ ಸುತ್ತೋಲೆಗಳಲ್ಲಿ ಬಹಿರಂಗಪಡಿಸುವಂತೆ ರಿಜಿಸ್ಟ್ರಾರ್ ಜನರಲ್‌ಗೆ ನಿರ್ದೇಶನ ನೀಡಿದೆ ಎಂದು ವರದಿ ಉಲ್ಲೇಖಿಸಿದೆ.